ಫುಟ್‌ಪಾತ್‌ನಲ್ಲಿ ಬೈಕ್ ಓಡಿಸಿದರೆ 5,000 ದಂಡ

fine-for-riding-a-bike
fine-for-riding-a-bike
Published on

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಸಚಿವರಿಗೆ ಪತ್ರ ಬರೆಯಲಿರುವ ಕೃಷ್ಣ ಬೈರೇಗೌಡ
  • ಪಾದಾಚಾರಿಗಳಿಗೆ ಅಪಘಾತವಾದರೆ ಕಠಿಣ ಕ್ರಮದ ಎಚ್ಚರಿಕೆ
ಬೆಂಗಳೂರು: ಫುಟ್‌ಪಾತ್‌ಗಳಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರಿಗೆ ದಂಡದ ಮೊತ್ತವನ್ನು 5,000 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಬುಧವಾರ ಬೆಂಗಳೂರು ನಗರ ಟ್ರಾಫಿಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಾಗರಿಕರ ನಡೆಯುವ ಹಕ್ಕನ್ನು ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ವಾಹನಗಳನ್ನು ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಸಹಿಸಲಾಗದು ಎಂದಿದ್ದಾರೆ.
ವಾಹನ ಸವಾರರು ಯಾವುದೇ ಭಯ ಇಲ್ಲದೆ ಒತ್ತುವರಿ ತೆರವಾಗಿರುವ ಪಾದಾಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಹಾಗಾಗಿ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಹಾಲಿ ಚಾಲ್ತಿಯಲ್ಲಿರುವ 500 ರೂ. ದಂಡವನ್ನು 5,000 ರೂ.ಗೆ ಏರಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆದು ಒತ್ತಾಯಿಸಲಿದ್ದೇನೆ ಎಂದರು.

ಮುಖ್ಯರಸ್ತೆಗಳಲ್ಲಿ ಪಾರ್ಕಿಂಗ್ ನಿಯಮ ಪಾಲಿಸಿರಿ:

ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಕಲ್ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಈ ನಿಯಮವನ್ನು ಜಾರಿಗೊಳಿಸುವುದು ವಾಸ್ತವದಲ್ಲಿ ಕಷ್ಟಸಾಧ್ಯ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳನ್ನಾದರೂ ಪಾಲಿಸಬೇಕು ಎಂದು ಸಚಿವರು ಅಧಿಕಾರಿಗಳ ಗಮನಕ್ಕೆ ತಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬದಲಿ ಪಾರ್ಕಿಂಗ್ ಅಥವಾ ಒನ್-ಸೈಡ್ ಪಾರ್ಕಿಂಗ್ ಎಂಬ ಪರ್ಯಾಯ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ, ವಾಹನ ಸವಾರರು ಈ ನಿಯಮವನ್ನು ಪಾಲಿಸುತ್ತಿಲ್ಲ. ತಿಂಗಳ ಎಲ್ಲ ದಿನಗಳಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಪರಿಣಾಮ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ಹಾಲಿ ಚಾಲ್ತಿಯಲ್ಲಿರುವ ನಿಯಮವನ್ನು ಪಾಲಿಸಲು ಇರುವ ಸಮಸ್ಯೆಯಾದರೂ ಏನು? ಎಂದು ಸಚಿವರು ಸಭೆಯಲ್ಲಿ ಅತೃಪ್ತಿ ಹೊರಹಾಕಿದರು.
ಸಭೆಯಲ್ಲಿ ನಗರ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತೆ ಆರ್.ಲತಾ, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟಾಚಲಪತಿ, ನವೀನ್ ಕುಮಾರ್ ರಾಜು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಗ್ನಲ್‌ಗಳಲ್ಲಿ ಬಸ್ ನಿಲ್ದಾಣಕ್ಕೆ ಅವಕಾಶವಿಲ್ಲ:

ಜಂಕ್ಷನ್ ಹಾಗೂ ಸಿಗ್ನಲ್‌ಗಳ ಬಳಿ ವಾಹನ ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಬಿಎಂಟಿಸಿ ಬಸ್ ಸೇರಿ ಯಾವುದೇ ವಾಹನಗಳನ್ನೂ ಅನಗತ್ಯವಾಗಿ ಸಿಗ್ನಲ್‌ಗಳ ಬಳಿ ನಿಲ್ಲಿಸಲು ಅವಕಾಶ ನೀಡಬಾರದು. ಸಿಗ್ನಲ್‌ಗಳಿಂದ 750 ಮೀ. ಹಾಗೂ ಜಂಕ್ಷನ್‌ಗಳಿಂದ 500 ಮೀ. ಅಂತರದಲ್ಲಿ ಯಾವುದೇ ಬಸ್ ನಿಲ್ದಾಣಗಳೂ ಇರುವಂತಿಲ್ಲ. ಬಸ್ ನಿಲ್ದಾಣಗಳು ಇದ್ದಲ್ಲಿ ಅಂತಹವುಗಳನ್ನು ಸ್ಥಳಾಂತರಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net