

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ)ಯ ವಿಭಾಗೀಯ ಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಉಗ್ರ ಚಟುವಟಿಕೆಗಳ ತಾಣವಾಗುತ್ತಿದೆ. ಎನ್ಐಎ ಇತ್ತೀಚೆಗೆ ನಗರದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅನೇಕ ಸ್ಲೀಪರ್ ಸೆಲ್ಗಳನ್ನು ಎನ್ಐಎ ವಿಫಲಗೊಳಿಸಿದೆ. ಹೀಗಾಗಿ ಎನ್ಐಎ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಗೃಹ ಸಚಿವ ಅಮಿತ್ ಷಾ ಅವರನ್ನು ಆಗ್ರಹಿಸಿದ್ದೆ. ಮನವಿಯನ್ನೂ ಮಾಡಿದ್ದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿರುವ ಗೃಹ ಸಚಿವ ಅಮಿತ್ ಷಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಎನ್ಐಎ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.