ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಂಗಾಪುರ ಮಾದರಿ ಪರಿಹಾರ: ಅಂಜುಮ್ ಪರ್ವೇಜ್ ಸಲಹೆ

Traffic (2)
Published on

ಬೆಂಗಳೂರು ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಂಗಾಪುರ ಮಾದರಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಸಲಹೆ ನೀಡಿದರು.

ಬೆಂಗಳೂರು ಟೆಕ್ ಶೃಂಗಸಭೆಯ ಎರಡನೇ ದಿನವಾದ ಗುರುವಾರ ‘ಭವಿಷ್ಯದ ಸಂಚಾರಕ್ಕಾಗಿ ಸಮನ್ವಯ, ಸ್ವಾಯತ್ತ, ಹಂಚಿಕೆಯ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು..

ಸಿಂಗಾಪುರದಲ್ಲಿ ಕಾರು ಖರೀದಿಸುವ ಜತೆಗೆ ಕಾರನ್ನು ಚಾಲನೆ ಮಾಡಲು ಮತ್ತು ಸಂಚಾರ ದಟ್ಟಣೆಯಾಗದಂತೆ ನಿಯಂತ್ರಿಸಲು ಕೂಡ ಅನುಮತಿ ಪಡೆಯಬೇಕಾಗುತ್ತದೆ. ಅಂತಹ ವ್ಯವಸ್ಥೆಯನ್ನು ಜಾರಿಗೊಳಿಸಿದರೆ, ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂದು ಹೇಳಿದರು.

ಪರ್ಪಲ್ ಮೊಬೈಲಿಟಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಪಟವರ್ಧನ್ ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ ಪ್ರಯಾಣ ಮತ್ತು ಸಂಚಾರ ವ್ಯವಸ್ಥೆ ಪರಿಸರ ಸ್ನೇಹಿಯಾಗುವತ್ತ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಹಕರ ಕ್ಯಾಬ್ ಬುಕಿಂಗ್ ವಿಧಾನ, ಸಂಚಾರ ಆಡಳಿತ, ಕಾರ್ಯಾಚರಣೆ, ಸಿಗ್ನಲಿಂಗ್ ವ್ಯವಸ್ಥೆ ಇವೆಲ್ಲವೂ ತಂತ್ರಜ್ಞಾನದ ಬಲದೊಂದಿಗೆ ಸ್ಮಾರ್ಟ್ ಆಗುತ್ತಿವೆ ಎಂದರು.

ಬೀಟಾ ಟೆಕ್ನಾಲಜೀಸ್ ಸಂಸ್ಥೆಯ ನಿರ್ದೇಶಕ ಬ್ಲೇಕ್ ಒಪ್ಸಾಹಿ, ಎಲೆಕ್ಟ್ರಿಕ್ ವಿಮಾನಗಳ ಸಂಚಾರಕ್ಕೆ ಭಾರತದಲ್ಲಿ ಹೆಚ್ಚಿನ ಅವಕಾಶವಿದೆ. ಸುಮಾರು 200 ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತ ಅತ್ಯುತ್ತಮ ವೈಮಾನಿಕ ಮೂಲಸೌಕರ್ಯ ಹೊಂದಿದ್ದು, ಭವಿಷ್ಯದಲ್ಲಿ ಖಾಸಗಿ ವಿಮಾನಗಳು ಹಾಗೂ ವಿಮಾನ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಲಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net