

ರಾಮ ಕಿಶನ್ ಕೆ.ವಿ.
ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದು ಅನಿವಾರ್ಯ. ಆದರೆ, ಅದೇ ಕಾಮಗಾರಿಗಳು ಜನರಿಗೆ ಕಿರಿಕಿರಿಯಾಗಿ ಮಾರ್ಪಟ್ಟರೆ ಏನು ಮಾಡುವುದು...ಗೋರಿಪಾಳ್ಯ ವಾರ್ಡ್ ವ್ಯಾಪ್ತಿಯ ಹೊಸಹಳ್ಳಿ ರೈಲ್ವೆ ಸೇತುವೆ ಮರು ನಿರ್ಮಾಣ ಕಾಮಗಾರಿಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಎರಡು ತಿಂಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ರ್ನಿಬಂಧಿಸಲಾಗಿದೆ. ಇದರಿಂದಾಗಿ ಗೋರಿಪಾಳ್ಯದಿಂದ ವಿಜಯನಗರಕ್ಕೆ ಹಾಗೂ ವಿಜಯನಗರದಿಂದ ಗೋರಿಪಾಳ್ಯಕ್ಕೆ ತೆರಳಲು ವಾಹನ ಸವಾರರು ಬದಲಿ ಮಾರ್ಗ ಬಳಸುತ್ತಿದ್ದಾರೆ. ಹಿಂದೆ ವಿಜಯನಗರದಿಂದ ಗೋರಿಪಾಳ್ಯಕ್ಕೆ ತೆರಳಲು 10 ನಿಮಿಷ ತೆಗೆದುಕೊಳ್ಳುತ್ತಿತ್ತು. ಮೇಲ್ಸುತುವೆ ಕಾಮಗಾರಿ ಕಾರಣಕ್ಕೆ ರಸ್ತೆ ಮುಚ್ಚಿದ ಪರಿಣಾಮವಿಜಯನಗರ ಅಥವಾ ಗೋರಿಪಾಳ್ಯಕ್ಕೆ ತೆರಳಲು ಅರ್ಧ ಗಂಟೆಗೂ ಅಧಿಕ ಸಮಯ ಬೇಕಾಗುತ್ತಿದೆ.
ಪೈಪ್ಲೈನ್ ರಸ್ತೆ ಹಾಗೂ ಟೆಲಿಕಾಂ ಕಡೆಯಿಂದ ಟ್ಯಾಂಕ್ ಬಂದ್ ರಸ್ತೆ ಸೇರಿ ಮೈಸೂರು ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರ ಪರಿಣಾಮ ಪ್ರತಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಹೊಸಹಳ್ಳಿ ರೈಲ್ವೇ ಸೇತುವೆಯಲ್ಲಿ ವಾಹನ ಸಂಚಾರ ರ್ನಿಬಂಧಿಸಿ ಎರಡು ತಿಂಗಳು ಕಳೆದಿವೆ. ದಿನದಿಂದ ದಿನಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ. ಇದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ನಿರ್ಮಾಣ ಸಾಮಗ್ರಿಗಳು ಎಲ್ಲೆಂದರಲ್ಲಿ ರಾಶಿ ಹಾಕಲಾಗಿದೆ.
ಶಾಲೆ, ಕಾಲೇಜು, ಆಸ್ಪತ್ರೆ ಸೇರಿ ಇತ್ಯಾದಿ ಸೌಲಭ್ಯಗಳಿಗೆ ಗೋರಿಪಾಳ್ಯದಲ್ಲಿ ವಾಸಿಸುತ್ತಿರುವ ನಿವಾಸಿಗಳು ವಿಜಯನಗರಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ, ಗಂಭೀರ ಆರೋಗ್ಯ ಸಮಸ್ಯೆ ಕಂಡು ಬಂದಾಗ ತಕ್ಷಣಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ. ಏನಾದರೂ ಸಾವು&ನೋವು ಉಂಟಾದರೆ ಯಾರು ಹೊಣೆ ಆಗುತ್ತಾರೆ. ಕಾಮಗಾರಿ ಆರಂಭಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಂಚಾರ ರ್ನಿಬಂಧಿಸಿ ತಿಂಗಳುಗಳೇ ಕಳೆದರೂ, ಇದುವರೆಗೂ ಹೇಳಿಕೊಳ್ಳುವಷ್ಟೂ ಕಾಮಗಾರಿ ಪ್ರಗತಿ ಕಂಡಿಲ್ಲ ಎಂದು ಸ್ಥಳಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಗೋರಿಪಾಳ್ಯದಲ್ಲಿ ಹೆಚ್ಚಿನ ಸಂಖ್ಯೆಯ ಅಂಗಡಿಗಳು ಹಾಗೂ ಮನೆಗಳು ಇವೆ. ಇದೀಗ ಹೊಸಹಳ್ಳಿ ರೈಲ್ವೇ ಮೇಲ್ಸೇತುವೆಯಲ್ಲಿ ಸಂಚಾರ ರ್ನಿಬಂಧಿಸಿರುವುದರಿಂದ ಯಾವುದೇ ವಾಹನಗಳು ಓಡಾಟ ನಡೆಸುತ್ತಿಲ್ಲ. ಕೆಲ ಜನರು ನಡೆದುಕೊಂಡು ಹೋಗಿ ಬಂದು ಮಾಡುತ್ತಿದ್ದಾರೆ. ಈ ವೇಳೆ ಎಲ್ಲೆಂದರೆ ಕಸ ಹಾಕುತ್ತಿದ್ದಾರೆ. ಪರಿಣಾಮ ಸೇತುವೆ ಕೆಲವೆಡೆ ಈಗಾಗಲೇ ಕಸದ ರಾಶಿ ಸೃಷ್ಟಿಯಾಗಿದೆ. ಇದು ಸಮರ್ಪಕವಾಗಿ ವಿಲೇವಾರಿ ಆಗದೇ ಇದ್ದಲ್ಲಿ, ಸಾಂಕ್ರಾಮಿಕ ರೋಗಗಳ ಸೃಷ್ಟಿಗೆ ಅವಕಾಶ ಮಾಡಿಕೊಡಲಿದೆ.
ಒಂದು ತಿಂಗಳು ಕೆಲಸ ಮಾಡಿ ಹೋದ ಕಾರ್ಮಿಕರು ಮತ್ತೆ ಬಂದಿಲ್ಲ. ಆದರೆ ಕಳೆದ ಎರಡು ತಿಂಗಳಿನಿಂದ ರಸ್ತೆ ಸಂಚಾರ ರ್ನಿಬಂದಿಸಲಾಗಿದೆ. ಇದರಿಂದ ವಿಜಯನಗರ ಸಂಪರ್ಕಿಸಲು ಸಾಧ್ಯವಾಗದೆ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಸಂಚಾರ ದಟ್ಟಣೆ ಉಂಟಾಗುತ್ತಿದೆ. ತುರ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸುತ್ತಾಡಿಕೊಂಡು ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
- ಖುರಂ ಖಾನ್, ಜೆ.ಜೆ. ನಗರ
ಗೋರಿಪಾಳ್ಯ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆಗೆ ತೆರಳುತ್ತಿದ್ದೇನೆ. ಹೊಸಳ್ಳಿ ರೈಲ್ವೇ ಸೇತುವೆಯಲ್ಲಿ ಸಂಚಾರ ರ್ನಿಬಂಧಿಸಿರುವ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಬದಲಿ ದಾರಿ ಕೇಳಿಕೊಂಡು ಹೋಗಬೇಕಾಗಿದೆ.
- ಸಜ್ಜದ್ ಬೇಗ್, ಶಿವಮೊಗ್ಗ
ರೈಲ್ವೇ ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ. ಸರಕುಗಳನ್ನು ಬದಲಿ ಮಾರ್ಗದಲ್ಲಿ ಅಂಗಡಿಗಳಿಗೆ ತರಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಶಾಮಣ್ಣ ಗಾರ್ಡನ್ ಅಂಡರ್ ಪಾಸ್ನಲ್ಲಿ ಸರಿಯಾಗಿ ಸಂಚಾರಿ ಪೊಲೀಸರ ನಿಯೋಜನೆ ಆಗಿಲ್ಲ. ಹೀಗಾಗಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
- ಸಮೀವುಲ್ಲಾ, ಶಾಮಣ್ಣ ಗಾರ್ಡನ್
ಎರಡು ತಿಂಗಳು ಕಳೆದರೂ ಹೊಸಹಳ್ಳಿ ರೈಲ್ವೇ ಮೇಲ್ಸೇತುವೆ ಮರುನಿರ್ಮಾಣ ಕಾಮಗಾರಿಯ ಯಾವ ಕೆಲಸವೂ ಆರಂಭವಾಗಿಲ್ಲ. ಆದರೆ ರೈಲ್ವೇ ಸೇತುವೆ ಮೇಲೆ ಸಂಚಾರ ರ್ನಿಬಂಧಿಸಿದ್ದಾರೆ. ಇದರಿಂದ ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
- ಎಸ್. ರಾಜು, ಆರ್ಪಿಸಿ ಲೇಔಟ್
ಸಂಚಾರ ನಿಷೇಧಿಸಿ ಎರಡು ತಿಂಗಳು ಕಳೆದರೂ, ಹೊಸಹಳ್ಳಿ ರೈಲ್ವೇ ಮೇಲ್ಸೇತುವೆ ಮರುನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಗೋರಿಪಾಳ್ಯ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ನಿತ್ಯ ಸವಾರರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ.
- ಹರೀಶ್, ಬಸವೇಶ್ವರ ನಗರ