ವೇಗದ ಗಾಳಿಯೊಂದಿಗೆ ವರ್ಷಧಾರೆ; ರಾಜಧಾನಿಯ 36 ಕಡೆಗಳಲ್ಲಿ ಧರೆಗುರುಳಿದ ಮರಗಳು

Rain
Published on

ಬೆಂಗಳೂರು: ಎರಡು ದಿನಗಳ ನಂತರ ಸಂಜೆಯಾಗುತ್ತಿದ್ದಂತೆ ಮತ್ತೊಮ್ಮೆ ವರುಣದೇವ ಅಬ್ಬರಿಸಿದ್ದು, ನಗರದ ವಿವಿಧ ಭಾಗಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಆನೇಕಲ್​ನ ವಣಕನಹಳ್ಳಿ, ಸೋಲೂರು, ಗೊಮ್ಮಾಳಾಪುರ ಸೇರಿ ಕೆಲವೆಡೆ ಆಲಿಕಲ್ಲು ಬಿದ್ದಿದೆ. ಇದರಿಂದ ಬಿಸಿಲಿನಿಂದ ಬಸವಳಿದಿದ್ದ ನಗರವಾಸಿಗಳು ಸಂತಸಗೊಂಡಿದ್ದಾರೆ.

ಸೋಮವಾರ ಸಂಜೆ 4 ಗಂಟೆ ಕಳೆಯುತ್ತಿದ್ದಂತೆ ಮೋಡ ಕವಿದ ವಾತಾವರಣ ಕಂಡುಬಂತು. ನಂತರದಲ್ಲಿ ಜೋರಾದ ಗಾಳಿಯೊಂದಿಗೆ ಆರಂಭವಾದ ಮಳೆ, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು. ಪರಿಣಾಮ ಹೊಸೂರು, ಬೊಮ್ಮಸಂದ್ರ, ಅತ್ತಿಬೆಲೆ, ಚಂದಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಕಷ್ಟು ಹೊತ್ತು ಸಂಚಾರದಟ್ಟಣೆ ಉಂಟಾಯಿತು. ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ದ್ವಿಚಕ್ರ ವಾಹನ ಸವಾರರು ಮೇಲ್ಸೇತುವೆ ಅಡಿಯಲ್ಲಿ ನಿಂತು ಆಶ್ರಯ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಚಾಲುಕ್ಯ ವೃತ್ತ, ಆನಂದ ರಾವ್​ ಸರ್ಕಲ್​, ಅರಮನೆ ರಸ್ತೆ ಸುತ್ತಮುತ್ತ, ಶಾಂತಿನಗರ, ಕೆ.ಆರ್​.ಮಾರುಕಟ್ಟೆ, ಪದ್ಮನಾಭನಗರ, ಕತ್ರಿಗುಪ್ಪೆ, ವಿಧಾನಸೌಧ, ಮೆಜೆಸ್ಟಿಕ್​, ಶಿವಾಜಿನಗರ, ಬಸವನಗುಡಿ ಸೇರಿ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಯಿತು. ಓಕಳಿಪುರ ಕಾರಿಡಾರ್​ನ ಎರಡೂ ಅಂಡರ್​ಪಾಸ್​ನಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಟ ಅನುಭವಿಸಿದರು.

ದಯಾನಂದನಗರದಲ್ಲಿ ಅತಿ ಹೆಚ್ಚು (32.5 ಮಿಮೀ) ಪ್ರಮಾಣದ ಮಳೆ ಬಿದ್ದಿದೆ. ಮಲ್ಲೇಶ್ವರ, ಮಾರುತಿ ಮಂದಿರ, ರಾಜಾಜಿನಗರ, ವಿಧಾನಸೌಧ, ರಾಜಮಹಲ್​ ಗುಟ್ಟಹಳ್ಳಿ, ಜಯಮಹಲ್​ ಸೇರಿ ನಗರದ ಉತ್ತರ ಭಾಗಗಳಲ್ಲಿ ವ್ಯಾಪಕ ವರ್ಷಧಾರೆಯಾಗಿದೆ.

ಅಂಡರ್​ಪಾಸ್​ ಜಲಾವೃತ

ಸಂಜೆ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತು. 36 ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಜತೆಗೆ ಇಷ್ಟೇ ಸಂಖ್ಯೆಯ ಮರಗಳಿಂದ ರೆಂಬೆ, ಕೊಂಬೆಗಳು ಮನೆ, ವಾಹನಗಳ ಮೇಲೆ ಬಿದ್ದು ಕೆಲವೆಡೆ ತೊಂದರೆ ಉಂಟಾಯಿತು. ಶೇಷಾದ್ರಿಪುರ ಠಾಣೆ ಬಳಿ ವಿದ್ಯುತ್​ ಕಂಬವೊಂದು ಉರುಳಿಬಿದ್ದಿದೆ. ಈ ವೇಳೆ ಉಂಟಾದ ಸಂಚಾರದಟ್ಟಣೆಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಸಮಸ್ಯೆ ಅನುಭವಿಸಿದರು. ರಸ್ತೆಯಲ್ಲೇ ನೀರು ಹರಿದು ಬರುತ್ತಿದ್ದ ಪರಿಣಾಮ ಪಾದಚಾರಿಗಳು ನಡೆದುಕೊಂಡು ಹೋಗಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಮರ ಬಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಕೆಲವೆಡೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾಯಿಸಿದರು.

10ರವರೆಗೆ ಮಳೆ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 10ರವರೆಗೆ ಗುಡುಗುಸಹಿತ ಹಗುರ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗುಡುಗು&ಮಿಂಚು ಸಹಿತ ವರ್ಷಧಾರೆಯಾಗಲಿದ್ದು, ಬಿರುಗಾಳಿಯೂ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net