

ಬೆಂಗಳೂರು: ಪುಡ್ ಡಿಲೆವರಿ ಸಿಬ್ಬಂದಿಯಿಂದ ನಡೆದ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲ್ಲೆ ಮಾಡಿದ್ದ ಯುವಕನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಕಾಮರಾಜ್ ಎಂಬ ಡೆಲಿವರಿ ಜೊಮ್ಯಾಟೋ ಸಿಬ್ಬಂದಿಯನ್ನು ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಮಂಗಳವಾರ ಮಧ್ಯಾಹ್ನ ಊಟವನ್ನು ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ್ದಳು. 3-30 ರ ಸಮಯಕ್ಕೆ ಊಟ ಡೆಲಿವರಿ ಆಗುವುದಾಗಿ ಆ್ಯಪ್ನಲ್ಲಿ ತಿಳಿಸಲಾಗಿತ್ತು. ಆದರೆ, ಡೆಲಿವರಿ ಬಾಯ್ ಕಾಮರಾಜ್ 4-30ಕ್ಕೆ ಫುಡ್ ಡೆಲಿವರಿ ಮಾಡಲು ಆಕೆಯ ಮನೆ ಬಾಗಿಲಿಗೆ ಬಂದಿದ್ದಾನೆ. ಅದಾಗಲೇ ಹಿತೇಶಾ ಜೊಮ್ಯಾಟೋ ಸಿಬ್ಬಂದಿಗೆ ಫುಡ್ ಡೆಲಿವರಿ ಲೇಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಳಂತೆ. ಕಾಮರಾಜ್ ಮನೆ ಬಾಗಿಲಿಗೆ ಬಂದಾಗ, ಆತನನ್ನು ಅಲ್ಲಿಯೇ ನಿಲ್ಲಿಸಿ, ಆರ್ಡರ್ ಕ್ಯಾನ್ಸಲ್ ಮಾಡಿರುವುದಾಗಿ ಆತನಿಗೆ ಹೇಳಿದ್ದರು.
ಹಾಗೆ ಹೇಳಿದ ಹಿತೇಶಾ ಬಾಗಿಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕಾಮರಾಜ್, ಬಾಗಿಲನ್ನು ದೂಡಿ, ಮನೆಯೊಳಗೆ ಹೋಗಿ ಊಟವನ್ನು ಇಟ್ಟು ಬಂದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. 'ನಿನ್ನ ಗುಲಾಮ ನಾನಲ್ಲ' ಎಂದು ಕಾಮರಾಜ್ ಬೈದಿದ್ದಾನೆ. ಆತನ ವರ್ತನೆಯಿಂದ ಸಿಟ್ಟಿಗೆದ್ದ ಹಿತೇಶಾ ಕೈಗೆ ಚಪ್ಪಲಿ ಎತ್ತಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಆತ ಆಕೆಯ ಮುಖಕ್ಕೆ ಪಂಚ್ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ. ಮೂಗಿನಿಂದ ರಕ್ತ ಬರುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಹಿತೇಶಾ ಹಂಚಿಕೊಂಡಿದ್ದರು. ಇದು ಇಂದು ಸಾಕಷ್ಟು ವೈರಲ್ ಆಗಿತ್ತು.