ವಿಶ್ವದರ್ಜೆಯ ಪೊಲೀಸಿಂಗ್ ವ್ಯವಸ್ಥೆಗೆ ಪಣ: ಬಾಡಿಗೆದಾರರ ಡೇಟಾ ಸಂಗ್ರಹಕ್ಕೆ ವಿಶೇಷ ಆ್ಯಪ್​, ಡ್ರಗ್ಸ್ ದಂಧೆ ತಡೆಯಲು ಹೊಸ ಯೋಜನೆ ಜಾರಿ

B Dayanand
Published on

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ, ಉಗ್ರ ಸಂಘಟನೆಗಳ ಟಾರ್ಗೆಟ್ ಆಗಿದೆ. ಸಣ್ಣ ಭಯೋತ್ಪಾದಕ ಕೃತ್ಯ ನಡೆದರೂ ಅದರ ಪರಿಣಾಮ ದೊಡ್ಡದಾಗಿರಲಿದೆ ಎಂಬುದು ಸಮಾಜಘಾತುಕ ಶಕ್ತಿಗಳ ಮನೋಭಾವ. ಇಲ್ಲಿನ ಪೊಲೀಸಿಂಗ್ ವ್ಯವಸ್ಥೆ ವಿಶ್ವದರ್ಜೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ವಿಶ್ವದರ್ಜೆಯ ಪೊಲೀಸಿಂಗ್ ವ್ಯವಸ್ಥೆ ಕಲ್ಪಿಸಲು ಈಗಾಗಲೆ ಸೇಫ್​ಸಿಟಿ ಯೋಜನೆ ಜಾರಿಗೆ ತರಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಮಾತುಗಳಿವು. ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್’ ಶುಕ್ರವಾರ ಏರ್ಪಡಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಉಗ್ರರ ಸಂಚು, ಸೈಬರ್ ಕ್ರೖೆಂ, ಸಂಚಾರ ಸಮಸ್ಯೆ, ಡ್ರಗ್ಸ್ ದಂಧೆ, ಪುಂಡಾಟಿಕೆ, ವ್ಹೀಲಿಂಗ್ ಹೀಗೆ ಅವರತ್ತ ತೂರಿ ಬಂದ ಹತ್ತಾರು ಪ್ರಶ್ನೆಗಳನ್ನು ಶಾಂತಚಿತ್ತದಿಂದಲೇ ‘ಶೂಟ್’ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ನಗರದಲ್ಲಿ 1ನೇ ಹಂತವಾಗಿ 4 ಸಾವಿರ ಕ್ಯಾಮರಾ ಅಳವಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟನೆ ಮಾಡಿದ್ದಾರೆ. 2ನೇ ಹಂತದಲ್ಲಿ 3,500 ಕ್ಯಾಮರಾ ಅಳವಡಿಕೆ ನಡೆಯುತ್ತಿದೆ. ಜತೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮುಖಚಹರೆ ಪತ್ತೆ ಕ್ಯಾಮರಾ, ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ತಂತ್ರಜ್ಞಾನವನ್ನು ಇಲಾಖೆ ಅಳವಡಿಸಿಕೊಂಡಿದೆ. ಇದಕ್ಕಾಗಿ ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ವಿುಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪರಿಚಿತರಿಗೆ ಬಾಡಿಗೆಗೆ ಮನೆ ಕೊಡುವ ಮುನ್ನ ಮಾಲೀಕರೇ ಬಾಡಿಗೆದಾರರ ಮಾಹಿತಿ ಕಲೆಹಾಕುವ ದೃಷ್ಟಿಯಿಂದ ಮೊಬೈಲ್ ಆಪ್ ಸಿದ್ಧಪಡಿಸಲಾಗುತ್ತಿದೆ. ಕಟ್ಟಡ ಮಾಲೀಕ ಬಾಡಿಗೆ ಕೊಡುವ ಮೊದಲು ಆಪ್​ನಲ್ಲಿ ಬಾಡಿಗೆದಾರನ ಮಾಹಿತಿ, ಗುರುತಿನ ಚೀಟಿ ಅಪ್​ಲೋಡ್ ಮಾಡಬೇಕು. ಈ ಮಾಹಿತಿ ಪೊಲೀಸರಿಗೆ ಸಿಗಲಿದೆ. ಭವಿಷ್ಯದಲ್ಲಿ ಬಾಡಿಗೆದಾರನಿಂದ ಏನಾದರೂ ತೊಂದರೆ ಉಂಟಾದರೆ, ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಸಮಾಜಘಾತುಕ ಕೃತ್ಯದಲ್ಲಿ ಭಾಗವಹಿಸುವವರು ಸುಲಭವಾಗಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ಅಪರಾಧದ ಶೈಲಿಯೂ ಬದಲು

ಇತ್ತೀಚೆಗೆ ಅಪರಾಧ ಕೃತ್ಯಗಳನ್ನು ಎಸಗುವ ಶೈಲಿಯೂ ಬದಲಾಗುತ್ತಿದೆ. ರಕ್ತರಹಿತ, ಗಡಿರಹಿತ ಮತ್ತು ಮುಖಚಹರೆ ತೋರಿಸದೆ ಎಲ್ಲಿಯೋ ಕುಳಿತು ಸೈಬರ್ ಕ್ರೖೆಂ, ಉಗ್ರ ಕೃತ್ಯಗಳನ್ನು ಎಸಗುತ್ತಿದ್ದಾರೆ. ಹೀಗಾಗಿ ಬೇಸಿಕ್ ಪೊಲೀಸಿಂಗ್ ಜತೆಗೆ ಅತ್ಯಾಧುನಿಕ ಉಪಕರಣಗಳನ್ನು ಇಲಾಖೆಯಲ್ಲಿ ಬಳಸಲಾಗುತ್ತಿದೆ. ಮೊದಲು 7ನೇ ಅಥವಾ 10ನೇ ತರಗತಿ ಓದಿದವರು ಇಲಾಖೆಗೆ ಸೇರುತ್ತಿದ್ದರು. ಆದರೀಗ ಪದವಿ, ಸ್ನಾತಕೋತ್ತರ ಪದವಿ ಓದಿದವರು ಬರುತ್ತಿದ್ದಾರೆ. ಇಂಜಿನಿಯರ್, ದಂತ ವೈದ್ಯರು ಪಿಎಸ್​ಐ ಆಗಿದ್ದಾರೆ. ಗುಪ್ತಚರ ಇಲಾಖೆಯನ್ನು ಬಲಗೊಳಿಸಿ ಪೊಲೀಸಿಂಗ್ ವ್ಯವಸ್ಥೆ ವಿಶ್ವದರ್ಜೆಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ಸೈಲೆನ್ಸರ್ ಆಲ್ಟ್ರೇಷನ್ ವಾಹನಕ್ಕೆ ಆರ್​ಸಿ ರದ್ದು..!

ವ್ಹೀಲಿಂಗ್, ಸೈಲೆನ್ಸರ್ ಆಲ್ಟ್ರೇಷನ್ (ಕರ್ಕಶ ಶಬ್ದ) ಮಾಡುವ ವಾಹನಗಳ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ವ್ಹೀಲಿಂಗ್ ಮತ್ತು ಸೈಲೆನ್ಸರ್ ಆಲ್ಟ್ರೇಷನ್ ಮಾಡಿಕೊಂಡು ಕರ್ಕಶ ಮಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆಯಲ್ಲಿ ವಾಹನಗಳ ಆರ್​ಸಿ ಕಾರ್ಡ್ ರದ್ದು ಪಡಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ವ್ಹೀಲಿಂಗ್ ಮಾಡುವ ಮತ್ತು ಸೈಲೆನ್ಸರ್ ಆಲ್ಟ್ರೇಷನ್ ಮಾಡಿ ಕೊಂಡು ಕರ್ಕಶ ಶಬ್ದ ಮಾಡುವ ವಾಹನಗಳ ಆರ್​ಸಿ ಕಾರ್ಡ್ ಜಪ್ತಿ ಮಾಡಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ಕೊಡಲಾಗುತ್ತದೆ. ಮೋಟಾರು ವಾಹನ ಕಾಯ್ದೆಯಡಿ ಆರೋಪಿಯ ವಾಹನದ ಆರ್​ಸಿ ರದ್ದುಪಡಿಸುತ್ತಾರೆ ಎಂದು ತಿಳಿಸಿದರು.

ತೃತೀಯ ಲಿಂಗಿಗಳಿಗೆ ಪುನರ್ವಸತಿ

ಹೊರವರ್ತಲ ರಸ್ತೆ, ಪ್ರಮುಖ ಜಂಕ್ಷನ್​ಗಳಲ್ಲಿ ಭಿಕ್ಷಾಟಣೆ ಮತ್ತು ಶುಭ ಸಮಾರಂಭ ಸ್ಥಳಗಳಿಗೆ ತೆರಳಿ ತೃತೀಯ ಲಿಂಗಿಗಳು ಹಾವಳಿ ಕೊಡುತ್ತಿರುವ ಬಗ್ಗೆ ಉತ್ತರಿಸಿದ ಬಿ. ದಯಾನಂದ್, ಜನರಿಂದ ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸುಲಿಗೆ, ಹಲ್ಲೆ ನಡೆಸಿದರೆ ಎಫ್​ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜಂಕ್ಷನ್​ಗಳಲ್ಲಿ ಭಿಕ್ಷಾಟಣೆ ಮಾಡುವವರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಸ್ವಯಂಸೇವಾ ಸಂಸ್ಥೆಯೊಂದು ಮುಂದೆ ಬಂದಿದೆ. ತೃತೀಯ ಲಿಂಗಿಗಳನ್ನು ಸಂರ್ಪಸಿ, ಅರಿವು ಮೂಡಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಬೇಕೆಂಬ ಗುರಿ ಹೊಂದಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಿ ಭಿಕ್ಷಾಟನೆ, ಜನರೊಂದಿಗೆ ಅಸಭ್ಯವರ್ತನೆ ತೋರುವ ಕೆಲಸಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪವಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ನಕಲಿ ಸುದ್ದಿಗಳಿಗೆ ಕಡಿವಾಣ

ಜಾಲತಾಣಗಳಲ್ಲಿ ಹರಿಬಿಡುವ ಸುಳ್ಳು ಸುದ್ದಿಗಳ ಹಾವಳಿಗೆ ಕಡಿವಾಣ ಹಾಕಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಹುಸಿ ಸುದ್ದಿಗಳ ಹಾವಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರದ ಕಮಾಂಡ್ ಸೆಂಟರ್​ನಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿತ್ತು. ಆದರೀಗ ಡಿಸಿಪಿ ವಿಭಾಗ, ಠಾಣೆ ಹಂತದಲ್ಲೂ ಸಿಬ್ಬಂದಿಗೆ ಸೈಬರ್ ಕ್ರೖೆಂಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಂದು ವಿಭಾಗ ಹಾಗೂ ಠಾಣೆಯಲ್ಲೂ ಆಯ್ದ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಫೇಕ್ ಸುದ್ದಿಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಜಾಲತಾಣದಲ್ಲಿ ನಕಲಿ ಸುದ್ದಿಗಳನ್ನು ಪತ್ತೆ ಮಾಡುವುದು ಹೇಗೆ, ಹಳೆಯ ಸುದ್ದಿ ಅಥವಾ ಎಲ್ಲಿ ನಡೆದಿದೆ ಎಂದು ತಕ್ಷಣ ಮಾಹಿತಿ ಕಲೆ ಹಾಕಿ ಜಾಲತಾಣದಲ್ಲೇ ಪ್ರತಿಕ್ರಿಯೆ ನೀಡುವುದು ಹೇಗೆ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆಗಳಿದ್ದರೆ ಅಂತಹವರನ್ನು ಪತ್ತೆ ಮಾಡುವ ಬಗ್ಗೆ ತರಬೇತಿ ನೀಡಲಾಗಿದೆ. ಕಮಾಂಡ್ ಸೆಂಟರ್ ಆದಮೇಲೆ ನಗರದ 8 ಉಪ ವಿಭಾಗದಲ್ಲಿ ಸೆಲ್ ತೆರೆಯಲಾಗಿದೆ. ಇವರು ತಮ್ಮ ವ್ಯಾಪ್ತಿಯ ಫೇಕ್ ಸುದ್ದಿಗಳ ಮೇಲೆ ನಿಗಾ ವಹಿಸಲಿದ್ದಾರೆ. ಠಾಣೆ, ಉಪ ವಿಭಾಗ ಹಾಗೂ ಕಮಿಷನರೇಟ್ ಹೀಗೆ 3 ಹಂತದಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ದಯಾನಂದ್ ತಿಳಿಸಿದರು.

ಬಾಡಿವೋರ್ನ್ ಕ್ಯಾಮರಾ ಆತಂಕ ಬೇಡ

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದರಿಂದ ಬಾಡಿ ವೋರ್ನ್ ಕ್ಯಾಮರಾ ಬಗ್ಗೆ ಪೊಲೀಸರಲ್ಲಿ ಅಪನಂಬಿಕೆ ಬಂದಿದೆ. ಕೆಲವೊಂದು ವೇಳೆ ಪೊಲೀಸರ ವಿರುದ್ಧವೇ ಸುಳ್ಳು ಆರೋಪ ಬಂದಾಗ ಕ್ಯಾಮರಾದಲ್ಲಿನ ವಿಡಿಯೋ ಅವರ ರಕ್ಷಣೆಗೆ ಬರಲಿದೆ.ಹೀಗಾಗಿ ಕರ್ತವ್ಯ ದೃಷ್ಟಿಯಿಂದ ಪೊಲೀಸರು ಕ್ಯಾಮರಾ ಧರಿಸಬೇಕು. ಮೊಬೈಲ್​ಗಿಂತ ಈ ಕ್ಯಾಮರಾ ಅಪಾಯವಲ್ಲ ಎಂದು ದಯಾನಂದ್ ಸ್ಪಷ್ಟಪಡಿಸಿದರು.

ಪಾಲಕರ ಮೀಟಿಂಗ್​ನಲ್ಲಿ ಪೊಲೀಸ್

ಮಾದಕದ್ರವ್ಯ ಸೇವನೆ ಯುವ ಪೀಳಿಗೆ ಮೇಲೆ ಜಾಗತಿಕ ಪರಿಣಾಮ ಬೀರುತ್ತಿದೆ. ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆಯೂ ಒಂದು ಭಾಗವಾಗಿದೆ. ಈ ಬಗ್ಗೆ ಶಾಲೆ- ಕಾಲೇಜುಗಳಲ್ಲಿ ತಿಳಿವಳಿಕೆ ಮೂಡಿಸಬೇಕು. ಡ್ರಗ್ಸ್ ಸಾಗಾಟ, ಮಾರಾಟದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೆ ಶಾಲೆ- ಕಾಲೇಜುಗಳಿಗೆ ಪೊಲೀಸರು ಭೇಟಿ ಕೊಟ್ಟು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸುತ್ತಿದ್ದು, ಉತ್ತಮ ಸ್ಪಂದನೆ ಲಭ್ಯವಾಗಿದೆ. ಇದರ ಮುಂದುವರಿದ ಭಾಗವಾಗಿ ಶಾಲೆ- ಕಾಲೇಜುಗಳಲ್ಲಿ ನಡೆಯುವ ಪಾಲಕರ ಮೀಟಿಂಗ್​ಗಳಲ್ಲಿ ಶಿಕ್ಷಕರ ಜತೆ ಪೊಲೀಸರು ಭಾಗವಹಿಸಿ ತಂದೆ-ತಾಯಿಗೂ ಜಾಗೃತಿ ಮೂಡಿಸಲಾಗುತ್ತದೆ ಎಂದು ದಯಾನಂದ್ ಹೇಳಿದರು.

ಬರ್ತ್​ಡೇಗೆ ಕಡ್ಡಾಯ ರಜೆ

ವಾರದ ರಜೆ ಸಿಗುತ್ತಿಲ್ಲ, 12 ತಾಸು ಕೆಲಸದ ಬಗ್ಗೆ ಪೊಲೀಸರ ಅಸಮಾಧಾನದ ಕುರಿತು ಮಾತನಾಡಿದ ಪೊಲೀಸ್ ಆಯುಕ್ತರು, ಕಳೆದ 2-3 ವರ್ಷಗಳಿಂದ ಪೊಲೀಸರಿಗೆ ಕಡ್ಡಾಯ ವಾಗಿ ಎರಡು ವಾರದ ರಜೆ ಕೊಡಲಾಗುತ್ತಿದೆ. ಈಗಲೂ ರಜೆ ಕೊಡಲಾಗುತ್ತಿದೆ. ಜತೆಗೆ ನಾನು ಬಂದ ಮೇಲೆ ಹುಟ್ಟುಹಬ್ಬದ ದಿನದಂದೂ ಕಡ್ಡಾಯವಾಗಿ ರಜೆ ಕೊಡುವಂತೆ ಸೂಚನೆ ನೀಡಿದ್ದೇನೆ. 12 ತಾಸು ಕರ್ತವ್ಯ ನಿರ್ವಹಿಸುತ್ತಿ ರುವುದು ನಿಜ. ಪೊಲೀಸರಿಗೆ ಒತ್ತಡ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಬಿ. ದಯಾನಂದ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net