

ಬೆಂಗಳೂರು: ನೆಟ್ಫ್ಲಿಕ್ಸ್ನಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ 'ಕ್ರೈಂ ಸ್ಟೋರೀಸ್:ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸರಣಿಯ ಪ್ರಥಮ ಕಂತನ್ನು ಪ್ರಸಾರ ಮಾಡದಂತೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ನೆಟ್ಫ್ಲಿಕ್ಸ್, ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಅಮೃತ ಪ್ರಕರಣದ ಬಗ್ಗೆ ಚಿತ್ರೀಕರಿಸಲಾಗಿರುವ 'ಎ ಮರ್ಡರ್ಡ್ ಮದರ್' ಎಪಿಸೋಡ್ಅನ್ನು ಬ್ಲಾಕ್ ಮಾಡಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ನಿರ್ಮಾಲಾ ಚಂದ್ರಶೇಖರ್ ಎಂಬುವರ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಧರ್ ರಾವ್ ಸಲ್ಲಿಸಿದ್ದ ಅರ್ಜಿಯ ಮೇಲೆ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಈ ಮಧ್ಯಂತರ ಆದೇಶ ಜಾರಿಗೊಳಿಸಿದ್ದಾರೆ.
ವೆಬ್ ಸೀರಿಸ್ನ ಮೊದಲ ಕಂತಿನಲ್ಲಿ ವಿಚಾರಾಣಾಧೀನ ಆರೋಪಿಗಳ ಹೇಳಿಕೆಗಳನ್ನು ಸೇರಿಸಲಾಗಿದೆ. ಆದ್ದರಿಂದ ಅದರ ಪ್ರಸಾರವು ಅವರಿಗೆ ಕಿರುಕುಳ ನೀಡುವುದಲ್ಲದೆ, ಅವರ ಬಗ್ಗೆ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ವೆಬ್ ಸರಣಿಯ ನಿರ್ಮಾಪಕರು ಮತ್ತು ನೆಟ್ಫ್ಲಿಕ್ಸ್ಗೆ ಹೇಳಿಕೆಗಳನ್ನು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.