

ಬೆಂಗಳೂರು: ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಸಂಗಾತಿಯನ್ನು ಕುಕ್ಕರ್ನಲ್ಲಿ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು 29 ವರ್ಷದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ತಾನು ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಹುಡುಗಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಶಂಕಿಸಿ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಮೂಲದ ವೈಷ್ಣವ್ (29) ಹಾಗೂ ದೇವಾ (24) ಕಳೆದ ಎರಡು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಕಾಲೇಜು ದಿನಗಳಿಂದಲ್ಲೇ ಇಬ್ಬರು ಸ್ನೇಹಿತರಾಗಿದ್ದು, ಖಾಸಗಿ ಕಂಪನಿಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಆರೋಪಿ ವೃಷ್ಣವ್ ತನ್ನ ಸಂಗಾತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿ ಆಕೆಯ ಜೊತೆ ಜಗಳ ತೆಗೆದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕೆಯ ಮೇಲೆ ಹಲ್ಲೆ ನಡೆಸಿ ಕುಕ್ಕರ್ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುಮಾರು ಘಂಟೆಗಳಿಂದ ದೇವಾ ಕರೆ ಸ್ವೀಕರಿಸಿದೆ ಇದ್ದಾಗ ಅನುಮಾನಗೊಂಡ ಆಕೆಯ ಸಹೋದರಿ ನೆರೆಹೊರೆಯವರಿಗೆ ಪರಿಶೀಲಿಸುವಂತೆ ತಿಳಿಸಿದ್ದಾರೆ.
ನೆರೆಹೊರೆಯವರು ದೇವಾ ಮನೆ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತಲೆಮಾರಿಸಿಕೊಂಡಿದ್ದ ಆರೋಪಿ ವೃಷ್ಣವ್ನನ್ನು ವಶಕ್ಕೆ ಪಡೆದಿದ್ದಾರೆ.
ವೃಷ್ಣವ್ ಹಾಗೂ ದೇವಾ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ವಿಚಾರ ಅವರ ಪೋಷಕರಿಗೂ ಸಹ ತಿಳಿದಿತ್ತು. ವೈಷ್ಣವ್ ಆಗಾಗ ದೇವಾ ಜೊತೆ ಜಗಳವಾಡುತ್ತಿದ್ದ ವಿಚಾರವೂ ಸಹ ಎಲ್ಲರಿಗೂ ತಿಳಿದಿತ್ತು ಮತ್ತು ಪೋಷಕರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿತ್ತು ಎಂದು ಮೃತ ಯುವತಿಯ ಪೋಷಕರು ತಿಳಿಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.