ಪ್ರಿಯಕರನ ವಿರುದ್ಧ ಸುಳ್ಳು ಸಾಕ್ಷಿ ಹೇಳಲು ನಕಾರ; ಗರ್ಭಿಣಿಯನ್ನು ಕೊಂದ ಪೋಷಕರು

harassment
Published on

ಲಖನೌ: ತನ್ನ ಪ್ರಿಯಕರನ ವಿರುದ್ಧ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳಲು ನಿರಾಕರಿಸಿದ್ದಳೆಂಬ ಕಾರಣಕ್ಕೆ 19 ವರ್ಷದ ಗರ್ಭಿಣಿಯನ್ನು ಪೋಷಕರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮುಜಾಫರ್​ನಗರ ಜಿಲ್ಲೆಯಲ್ಲಿ ನಡೆದಿದೆ.

ಮಗಳನ್ನು ಹತ್ಯೆ ಮಾಡಿದ ಬಳಿಕ ಆರೋಪಿಗಳಿಬ್ಬರು ಆಕೆಯ ಶವವನ್ನು ನದಿಗೆ ಎಸೆದು ಪರಾರಿಯಾಗಲು ಯತ್ನಿಸಿದ್ದರು. ಸ್ಥಳೀಯರ ಮೂಲಕ ಕೊಲೆ ವಿಚಾರ ತಿಳಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಶವವನ್ನು ನದಿಯಿಂದ ಹೊರತೆಗೆದಿದ್ದಾರೆ.

ಪ್ರಕರಣದ ಹಿನ್ನಲೆ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಜಾಫರ್​ನಗರದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ್​ ಸುಮನ್​ ಮೃತ ಯುವತಿ 2022ರ ಅಕ್ಟೋಬರ್​ ತಿಂಗಳಲ್ಲಿ ತನ್ನ ಪ್ರಿಯಕರ ಮೀರಠ್​ ಮೂಲದ ನಿವಾಸಿ ರಾಹುಲ್​ ಕುಮಾರ್​ ಎಂಬಾತನ ಜೊತೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಳು. ಬಳಿಕ ಅದೇ ವರ್ಷ ಡಿಸೆಂಬರ್​​ ತಿಂಗಳಲ್ಲಿ ಜೋಡಿಗಳಿಬ್ಬರನ್ನು ಪತ್ತೆ ಹಚ್ಚಿದ ಕುಟುಂಬಸ್ಥರು ಯುವತಿಯನ್ನು ಮನೆಗೆ ವಾಪಸ್​ ಕರೆ ತಂದಿದ್ದಾರೆ.

ಮಗಳನ್ನು ಮನೆಗೆ ವಾಪಸ್​ ಕರೆತಂದ ಕುಟುಂಬಸ್ಥರು ಆಕೆಗೆ ಬೇರೊಬ್ಬನ ಜೊತೆ ವಿವಾಹ ಮಾಡಿಸಲು ಚಿಂತನೆ ನಡೆಸುತ್ತಿರುವಾಗಲೇ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಕೂಡಲೇ ಕುಟುಂಬಸ್ಥರು ಆಕೆಯ ಪತಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಡಿ ದೂರು ದಾಖಲಿಸಿದ್ದು, ಆಕೆಗೆ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹೇರಿದ್ದಾರೆ.

ನಿರಾಕರಿಸಿದ್ದಕ್ಕೆ ಹತ್ಯೆ

ಪೋಷಕರ ಒತ್ತಾಸೆಯಂತೆ ಯುವತಿ ಸುಳ್ಳು ಸಾಕ್ಷಿ ಹೇಳಲು ನಿರಾಕರಿಸಿದ್ದು, ಆಕೆಯನ್ನು ದಂಪತಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಶವವನ್ನು ನದಿಗೆ ಎಸೆದು ಪರಾರಿಯಾಗಲು ಸಿದ್ದತೆ ನಡೆಸುತ್ತಿದ್ದರು. ಶನಿವಾರ ಆಕೆ ನ್ಯಾಯಾಲಯಕ್ಕೆ ಹಾಜರಾಗದಿದ್ದಾಗ ಅನುಮಾನಗೊಂಡು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದು, ಕುಟುಂಬದ ಪ್ರತಿಷ್ಠೆಗಾಗಿ ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ್​ ಸುಮನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net