

ಬೆಂಗಳೂರು: ಕರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ಮತ್ತು ಸರ್ಕಾರ ಎಚ್ಚರಿಕೆ ನೀಡಿದ್ದರೂ ಜನಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಿದರೂ ಅದನ್ನು ಲೆಕ್ಕಿಸದ ಜನರು ಮತ್ತೊಮ್ಮೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ನಗರದ ವಿವಿಪುರಂನ ಸಜ್ಜನ್ ರಾವ್ ವೃತ್ತದ ಬಳಿಯಿರುವ ಫುಡ್ ಸ್ಟ್ರೀಟ್ನಲ್ಲಿ ಕೋವಿಡ್ ನಿಯಮ ಮಾಯಮಾಗಿದೆ. ಪ್ರತಿದಿನ ಸಂಜೆ ನೂರಾರು ಮಂದಿ ಆಹಾರ ಸವಿಯಲು ಫುಡ್ ಸ್ಟ್ರೀಟ್ ಬಳಿ ಸೇರುತ್ತಿದ್ದಾರೆ. ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸರಿಯಾಗಿ ಮಾಸ್ಕ್ ಧರಿಸದೇ ಗುಂಪು ಗುಂಪಾಗಿ ಒಂದೆಡೆ ಸೇರಿರುವುದು ಕರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತಿದೆ.
ಸರ್ಕಾರ ಪ್ರತಿದಿನ ಕರೊನಾ ನಿಯಮ ಪಾಲಿಸಿ ಎಂದು ಮನವಿ ಮಾಡುತ್ತಲೇ ಬಂದಿದೆ. ಹೀಗಿದ್ದರೂ ಜನ ಸೇರಿರುವುದು ದುರ್ದೈವದ ಸಂಗತಿ. ಫುಡ್ ಕೋರ್ಟ್ನಲ್ಲಿ ಅಷ್ಟೊಂದು ಜನ ಸೇರುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಎಚ್ಚೆತ್ತು ಕಟ್ಟುನಿಟ್ಟಾಗಿ ಕರೊನಾ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಿದೆ.