More

    ಆಲ್​ ದಿ ಬೆಸ್ಟ್​ ಮಕ್ಕಳೇ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

    ಬೆಂಗಳೂರು: ಕೊನೆಗೂ ಕರೊನಾತಂಕದ ಕಠಿಣ ಕಾಲಘಟ್ಟ ದಾಟಿಕೊಂಡು 2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು (ಜು.19) ಆರಂಭವಾಗಿದೆ. ಕೇವಲ 2 ದಿನಗಳಲ್ಲಿ ಮುಗಿಯುವ ಪರೀಕ್ಷೆ ರಾಜ್ಯಾದ್ಯಂತ 4884 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕೊನೆಯ ದಿನದ ಪರೀಕ್ಷೆ ಗುರುವಾರ (ಜು.22) ನಡೆಯಲಿದ್ದು, ಈ ವರ್ಷ ಪರೀಕ್ಷೆ ಬರೆದವರೆಲ್ಲರೂ ಉತ್ತೀರ್ಣರಾಗಲಿದ್ದಾರೆ ಎಂದು ಶಿಕ್ಷಣ ಇಲಾಖೆ ಈಗಾಗಲೇ ಘೋಷಿಸಿರುವುದರಿಂದ ಎಲ್ಲರೂ ನಿರಾತಂಕವಾಗಿ ಬರೆಯಬಹುದಾಗಿದೆ.

    ಇಂದು ಬೆಳಗ್ಗೆಯೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆಯಲು ಮುಂದಾದರು. ಆರೋಗ್ಯ ಇಲಾಖೆಯ ಎಸ್‌ಒಪಿ ಅನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ನಗರದ ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಂತರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಇದು ಪರೀಕ್ಷಾ ಕೇಂದ್ರಗಳಲ್ಲ, ಬದಲಿಗೆ ಸುರಕ್ಷತಾ ಕೇಂದ್ರಗಳಾಗಿವೆ. ಒಂದು ವೇಳೆ ಯಾವುದೇ ಶುಲ್ಕ ಪಾವತಿ ಮಾಡಿಲ್ಲ ಎಂದು ಪರೀಕ್ಷೆಯಿಂದ ವಂಚಿತರಾಗುವ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಲ್ ಟಿಕೆಟ್ ಪಡೆಯಲಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವಕಾಶವಿದೆ ಕೊಡಲಾಗುವುದು‌. ರಾಜ್ಯಾದ್ಯಂತ ೩೪ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ನಾಳೆ ಸಂಜೆ ೪.೩೦ರ ವೇಳೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಪರೀಕ್ಷೆ ಬೆ.10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಇಂದು (ಜು.19) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜು.22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯದ ಪರೀಕ್ಷೆಗಳು ನಡೆಯಲಿವೆ. ನೆಗಡಿ, ಜ್ವರ, ಕೆಮ್ಮು, ಶೀತ ಇನ್ನಿತರ ಲಕ್ಷಣ ಇರುವ ಹಾಗೂ ಕರೊನಾ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ವ್ಯವಸ್ಥೆ ಕಲ್ಪಿಸಿದೆ.

    ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಪ್ರತ್ಯೇಕ ಪ್ರಮಾಣಿತ ಕಾರ್ಯಚರಣಾ ವಿಧಾನ (ಎಸ್​ಒಪಿ) ರೂಪಿಸಿದೆ.

    ಈ ವರ್ಷದ ಪರೀಕ್ಷೆ ಹೊಸತೇನು?
    – ಕೇವಲ ಎರಡು ಪತ್ರಿಕೆ, ಎರಡು ದಿನ ಪರೀಕ್ಷೆ
    – ಒಎಂಆರ್ ಮೂಲಕ ಉತ್ತರ ಪತ್ರಿಕೆ
    – ಹೆಸರು, ನೋಂದಣಿ ಸಂಖ್ಯೆ, ಫೋಟೋ ಎಲ್ಲವೂ ಒಎಂಆರ್​ನಲ್ಲಿರಲಿದೆ.
    – ಪರೀಕ್ಷೆ ಬರೆದವರೆಲ್ಲರೂ ಪಾಸ್

    ಆಗಸ್ಟ್​ನಲ್ಲಿ ಮತ್ತೆ ಪರೀಕ್ಷೆ
    ಪಾಸು, ಪೇಲ್ ಭಯವಿಲ್ಲದೆಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಆ ವಿದ್ಯಾರ್ಥಿಗಳು ಆಗಸ್ಟ್​ನಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಿದ್ದು, ಆ ವೇಳೆ ಹಾಜರಾಗಬಹುದಾಗಿದೆ.

    ಎರಡು ಪತ್ರಿಕೆ 2 ದಿನ ಪರೀಕ್ಷೆ
    ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಆರು ಪತ್ರಿಕೆಗಳನ್ನು 2 ಪ್ರಶ್ನೆ ಪತ್ರಿಕೆಗಳಾಗಿ ಪರಿವರ್ತಿಸಿ ಒಎಂಆರ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಎರಡು ದಿನ ಎರಡು ಪರೀಕ್ಷೆಗಳು ಬರೆದರೆ ಸಾಕು.

    ವಿದ್ಯಾರ್ಥಿಗಳಿಗೆ ಆತಂಕ ಬೇಡ. ಸರ್ಕಾರ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಬರೆಯಲು ಮುಂದೆ ಬರಬೇಕು.
    | ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಮೂರು ಬಣ್ಣದ ಒಎಂಆರ್ ಶೀಟ್
    19ರಂದು ನಡೆಯಲಿರುವ ಕೋರ್ ವಿಷಯಗಳ ಪರೀಕ್ಷೆಗಳಲ್ಲಿ ಗಣಿತ ವಿಷಯಕ್ಕೆ ಗುಲಾಬಿ, ವಿಜ್ಞಾನಕ್ಕೆ ಕಿತ್ತಳೆ ಹಾಗೂ ಸಮಾಜ ವಿಜ್ಞಾನಕ್ಕೆ ಹಸಿರು ಕಲರ್ ಒಎಂಆರ್ ಶೀಟ್ ಬರುತ್ತದೆ. ಇದೇ ರೀತಿ ಜು. 22ರಂದು ನಡೆಯುವ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ಪ್ರಥಮ ಭಾಷೆಗೆ ಪಿಂಕ್, ದ್ವಿತೀಯ ಭಾಷೆಗೆ ಆರೆಂಜ್ ಮತ್ತು ತೃತೀಯ ಭಾಷೆಗೆ ಗ್ರೀನ್ ಒಎಂಆರ್ ಶೀಟ್ ಬರುತ್ತದೆ. 40 ಅಂಕದ ಬಹು ಆಯ್ಕೆ ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಇವುಗಳಲ್ಲಿ ಬರುವ ಉತ್ತರದ ವೃತ್ತಾಕಾರವನ್ನು ನೀಲಿ ಅಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್​ನಿಂದ (ಶೇಡ್)ತುಂಬಬೇಕು. ಅನವಶ್ಯಕವಾಗಿ ಶೀಟ್​ನಲ್ಲಿ ಗೀಚು ಹಾಕುವುದಾಗಲಿ ಅಥವಾ ಶೇಡ್ ಮಾಡಬಾರದು. ಒಎಂಆರ್ ಶೀಟ್ ಮೌಲ್ಯಮಾಪನವನ್ನು ಯಂತ್ರಗಳೇ ಮಾಡುವುದರಿಂದ ಬೇಗ ಫಲಿತಾಂಶ ಪಡೆಯಬಹುದು.

    ಅಂಕ ನೀಡಿಕೆ ಹೇಗೆ?
    ಕೋರ್ ವಿಷಯಗಳ ಪ್ರತಿ ವಿಷಯಕ್ಕೆ 40 ಬಹು ಆಯ್ಕೆಯ ಪ್ರಶ್ನೆಗಳಿಗೆ 80 ಅಂಕಗಳಿರುತ್ತವೆ. ಭಾಷಾ ವಿಷಯಗಳ ಪ್ರಥಮ ಭಾಷೆಗೆ 40 ಬಹು ಆಯ್ಕೆಯ ಪ್ರತಿ ಪ್ರಶ್ನೆಗೆ ಎರಡೂವರೆ ಅಂಕಗಳಿರುತ್ತವೆ. ಇನ್ನುಳಿದ ದ್ವಿತೀಯ ಭಾಷೆಗೆ 80 ಮತ್ತು ತೃತೀಯ ಭಾಷೆಗೆ 80 ಅಂಕಗಳಿರುತ್ತವೆ. ಮೊದಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ ಈಗಲೂ ಒಟ್ಟು 625 ಅಂಕಗಳಿರುತ್ತವೆ.

    ಬಗೆಹರಿಯದ ಪ್ರವೇಶಪತ್ರ ಸಮಸ್ಯೆ
    ರಾಜ್ಯದಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಈ ಪೈಕಿ ಎಷ್ಟು ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿದ್ದಾರೆ? ಎಷ್ಟು ಜನ ಮಾಡಿಲ್ಲ ಎಂಬ ಮಾಹಿತಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಳಿ ಇಲ್ಲ. ಪ್ರವೇಶಪತ್ರ ಸಂಬಂಧ ಮಂಡಳಿಯು 12 ದೂರುಗಳನ್ನು ಸ್ವೀಕರಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ 150 ದೂರುಗಳು ಬಂದಿದ್ದು, ಅದನ್ನು ಇತ್ಯರ್ಥ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ನಿಖರವಾದ ಮಾಹಿತಿ ಮಂಡಳಿಯ ಬಳಿ ಇಲ್ಲ.

    ಪೆಗಾಸಸ್ ಸ್ಪೈವೇರ್​ ಬಳಸಿ ರಾಜಕಾರಣಿಗಳು, ಪತ್ರಕರ್ತರ ಫೋನ್​ ಹ್ಯಾಕ್​: ಕೇಂದ್ರ ಸರ್ಕಾರ ಹೇಳಿದ್ದು ಹೀಗೆ… ​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts