More

    ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಾಮೀಣ ಕಲರವ

    ಹಾಸನ: ಉರಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದ ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಓಡಿದರೆ, ಮತ್ತೊಂದೆಡೆ ಹಗ್ಗ-ಜಗ್ಗಾಟಕ್ಕೆ ನಿಂತು ಬಲಾಬಲ ಶಕ್ತಿ ಪ್ರದರ್ಶಿಸುವ ಮೂಲಕ ನಾವು ಎಲ್ಲದಕ್ಕೂ ಸೈ ಎಂದು ಹುಬ್ಬೇರಿಸಿದರು.
    ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಗುರುವಾರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಕಂಡು ಬಂದ ಕ್ಷಣಗಳು.
    ವರ್ಷಪೂರ್ತಿ ಪಾಠ ಪ್ರವಚನದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಕ್ರೀಡೆಗಳಾದ ನೀರು ಹೊರುವ ಆಟ, ಮಡಿಕೆ ಹೊಡೆಯುವ ಆಟ, ಗೋಣಿಚೀಲದ ಓಟ, ಕೈ ಗಮ್ಮತ್ತು, ಮೂರು ಕಾಲು ಓಟ, ಹಗ್ಗ-ಜಗ್ಗಾಟ, ರಂಗೋಲಿ ಸ್ಪರ್ಧೆ, ಕುಂಟೆ ಬಿಲ್ಲೆ, ಸೊಬಾನೆ ಪದ ಹಾಡುಗಾರಿಕೆ ಸ್ಪರ್ಧೆ, ಕಸದಿಂದ ರಸವತ್ತಾದ ವಸ್ತುಗಳನ್ನು ಮಾಡುವ ಆಟ ನಡೆಸಲಾಯಿತು.
    ವಿದ್ಯಾರ್ಥಿನಿಯರು ತಲೆ ಮತ್ತು ಸೊಂಟದ ಮೇಲೆ ನೀರು ತುಂಬಿದ ಕೊಡ ಹೊತ್ತು ಸರಾಗವಾಗಿ ಓಡುತ್ತಿದ್ದರೆ ಇತ್ತ ಸ್ನೇಹಿತೆಯರ ಶಿಳ್ಳೆ ಮತ್ತು ಚಪ್ಪಾಳೆ ಹೊಡುವ ಮೂಲಕ ಪ್ರೊತ್ಸಾಹಿಸಿದರು. ಮೂರು ಕಾಲಿನ ಓಟ ನಡೆಯುತ್ತಿದ್ದಂತೆ ನೋಡುಗರ ಮೈ ಜುಮ್ಮೆನ್ನುವಂತಿತ್ತು, ಹಾಗೆಯೇ ಗೊಣಿಚೀಲದ ಓಟದಲ್ಲಿ ವಿದ್ಯಾರ್ಥಿನಿಯರು ಕಪ್ಪೆಗಳಂತೆ ಕುಪ್ಪಳಿಸಿ ಸಂತಸಪಟ್ಟರು.
    ಇನ್ನು ಹಗ್ಗ-ಜಗ್ಗಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರ ತಂಡಗಳು ತಮ್ಮ ಬಲಾಬಲವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಕೂಟಕ್ಕೆ ಶಕ್ತಿಯನ್ನು ತುಂಬಿದರು. ಅತ್ತ ಕುಂಟೆ ಬಿಲ್ಲೆ ಸ್ಪರ್ಧೆಗೆ ಭಾಗವಹಿಸಲು ವಿದ್ಯಾರ್ಥಿನಿಯರು ಮುಗಿಬಿದಿದ್ದರು. ಬಾಲ್ಯದ ಆಟವನ್ನು ಆಡಲು ವಿದ್ಯಾರ್ಥಿನಿಯರು ಸಾಲುಗಟ್ಟಿ ನಿಂತಿದ್ದು ಎಲ್ಲರ ಗಮನ ಸೆಳೆಯಿತು.
    ಕ್ಯಾಂಟೀನ್ ಡೇ
    ಈ ಸಂದರ್ಭದಲ್ಲಿ ಆಯೋಜಿಸಿದ್ದ ಕ್ಯಾಂಟೀನ್ ಡೇನಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು, ರಾಗಿ ಅಮ್ಲಿ, ಮಸಾಲೆ ಮಜ್ಜಿಗೆ, ಮೊಳಕೆ ಕಾಳುಗಳು, ಚುರುಮುರಿ, ಪಾನಿಪುರಿ, ಬಗೆಬಗೆಯ ಹಣ್ಣುಗಳು, ಬಿರಿಯಾನಿಯನ್ನು ಸಿದ್ಧಪಡಿಸಿ ಮಾರಾಟ ಮಾಡಿ ತಿಂಡಿ ಪ್ರಿಯರನ್ನು ತಮ್ಮತ್ತ ಸೆಳೆದರು.
    ಇದಕ್ಕೂ ಮೊದಲು ಗ್ರಾಮೀಣ ಕ್ರೀಡೆ ಹಾಗೂ ಕ್ಯಾಂಟಿನ್ ಡೇಗೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಅವರು, ಇತ್ತೀಚೆಗೆ ಯುವಪೀಳಿಗೆಯಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಅವರಲ್ಲಿ ಆಸಕ್ತಿ ಹೆಚ್ಚಿಸುವ ಸಲುವಾಗಿ ಗ್ರಾಮೀಣ ಕ್ರೀಡೆ ಹಾಗೂ ಕ್ಯಾಂಟಿನ್ ಡೇ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.
    ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್.ಎನ್.ಹರೀಶ್ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಗ್ರಾಮೀಣ ಕಲರವ ಹಮ್ಮಿಕೊಳ್ಳಲಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾದ ಗ್ರಾಮೀಣ ಕ್ರೀಡೆಗಳು ವಿಶೇಷ ಕ್ರೀಡೆಗಳಾಗಿವೆ. ಪ್ರತಿ ವರ್ಷ ನಡೆಸುವ ಈ ಗ್ರಾಮೀಣ ಕಲರವಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
    ಗ್ರಾಮೀಣ ಕಲರವದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಗ್ರಾಮೀಣ ಕಲರವವನ್ನು ಯಶಸ್ವಿಗೊಳಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts