

ಬೆಂಗಳೂರು: ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಕುಪಿತಗೊಂಡ ಓಲಾ ಚಾಲಕನೋರ್ವ ಮಹಿಳೆಯ ಕೆನ್ನೆಗೆ ಬಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಟೋ ಚಾಲಕ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಸಿಟ್ಟಿನಿಂದ ಮಹಿಳೆ ಮೇಲೆ ರೇಗಾಡುತ್ತಿರುವ ಆಟೋ ಚಾಲಕ ಆಕೆಯ ಮೇಲೆ ಹಲ್ಲೆ ನಡೆಸುತ್ತಾನೆ. ಮಿಸ್ ಆಗಿ ನೀವು ನನ್ನ ರೈಡ್ಅನ್ನು ಅದೇಗೆ ಕ್ಯಾನ್ಸಲ್ ಮಾಡುತ್ತೀರಾ ಎಂದು ಪ್ರಶ್ನಿಸಿದ ಆತ, ನಿಮ್ಮಪ್ಪ ಗ್ಯಾಸ್ ಕೊಡ್ತಾನಾ ಎಂದು ಕೂಗಾಡುತ್ತಾನೆ. ನನ್ನ ಮೇಲೆ ಏಕೆ ಕೂಗಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಯುವತಿಯ ಫೋನ್‌ಅನ್ನು ಆಟೋ ಚಾಲಕ ಕಸಿದುಕೊಳ್ಳಲು ಮುಂದಾಗುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಕುರಿತಾದ ವಿಡಿಯೋವನ್ನು ನೀತಿ ಎಂಬ ಯುವತಿಯು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಬುಧವಾರ ನಾನು ಹಾಗೂ ನನ್ನ ಫ್ರೆಂಡ್ ಇಬ್ಬರೂ ಓಲಾ ಪೀಕ್ ಅವರ್‌ನಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದೆವು. ಮೊದಲು ಬಂದ ಆಟೋವನ್ನು ನಾವು ಹತ್ತಿಕೊಂಡು ಮತ್ತೊಂದನ್ನು ಕ್ಯಾನ್ಸಲ್ ಮಾಡಿದೆವು. ಆದರೆ, ಬುಕ್ಕಿಂಗ್ ಕ್ಯಾನ್ಸಲ್ ಆದ ಆಟೋ ಡ್ರೈವರ್ ನಮ್ಮ ಫಾಲೋ ಮಾಡಿಕೊಂಡು ಬಂದಿದ್ದಲ್ಲದೆ, ನಮ್ಮ ಮೇಲೆ ಕೂಗಾಡಲು ಶುರು ಮಾಡಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ.
ನಮ್ಮನ್ನು ಬಾಯಿಗೆ ಬಂದ ಹಾಗೆ ಬೈದಿದ್ದು ಮಾತ್ರವಲ್ಲದೆ, ನಿಮ್ಮ ಅಪ್ಪನ ಆಟೋ ಇದಾ ಗ್ಯಾಸ್ ಹಾಕಿಸಲು ದುಡ್ಡು ಅವನು ಕೊಡುತ್ತಾನ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನು ರೆಕಾರ್ಡ್ ಮಾಡುವಾಗ ಆತ ನಮ್ಮ ಫೋನ್‌ಅನ್ನು ಕಿತ್ತುಕೊಳ್ಳಲು ಬಂದ. ನಾವು ಪೊಲೀಸ್ಗೆ ದೂರು ಕೊಡುತ್ತೇವೆ ಎಂದು ಹೇಳಿದಾಗ ಆತ ಹೆದರದೆ ನಮ್ಮ ಮೇಲೆ ಮತ್ತಷ್ಟು ಕೂಗಾಡಲು ಶುರು ಮಾಡಿದ. ನಾವು ಮಾಡಿದ ಒಂದು ತಪ್ಪೇನೆಂದರೆ ನಾನು ನನ್ನ ಗೆಳೆಯ ಇಬ್ಬರು ಏಕಕಾಲದಲ್ಲಿ ಆಟೋವನ್ನು ಬುಕ್ ಮಾಡಿದ್ದು. ಬೆಂಗಳೂರಿನಲ್ಲಿ ಈ ರೀತಿ ಸಾಮಾನ್ಯವಾಗಿ ಆಗುತ್ತಿರುತ್ತದೆ.
ಮೊದಲಿಗೆ ಆತ ನನಗೆ ಬೆದರಿಕೆ ಹಾಕಿದ್ದು ಹಾಗೂ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ನನ್ನ ಫೋನ್‌ಅನ್ನು ಕಸಿದುಕೊಳ್ಳಲು ಮುಂದಾದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ನಾನು ಇದಕ್ಕೆ ವಿರೋಧಿಸಿದೆ. ಈ ವೇಳೆ ಆತ ಆಟೋ ಡ್ರೈವರ್ ಮುಂದೆಯೇ ನನ್ನ ಕೆನ್ನೆಗೆ ಬಾರಿಸಿದ. ಈ ವೇಳೆ ಅಲ್ಲಿದ್ದವರು ಆತನನ್ನು ತಡೆದರೂ ಸುಮ್ಮನಾಗದೆ ಬೆದರಿಕೆ ಹಾಕಲು ಮುಂದುವರೆಸಿದ ಎಂದು ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಇತ್ತ ಘಟನೆಗೆ ಸಂಬಂಧಿಸಿದಂತೆ ಓಲಾ ಹಾಗೂ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಮಾಹಿತಿಯನ್ನು ಲಗತಿಸುವಂತೆ ಸೂಚಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಹಲವರು ಆಟೋ ಡ್ರೈವರ್ನ ನಡೆಗೆ ಕಿಡಿಕಾರಿದ್ದಾರೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.