

ಗೋಣಿಕೊಪ್ಪಲು: ಮಹಿಳೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಪೊನ್ನಂಪೇಟೆ ತಾಲೂಕು ಮಾಯಮುಡಿ ಗ್ರಾಮದ ಚೆಪ್ಪುಡಿರ ರಾಧಾ ಅಚ್ಚಯ್ಯ ಸಾಕ್ಷಿ.
ಸುಮಾರು 50 ಎಕರೆ ಕೃಷಿ ಭೂಮಿ ಹೊಂದಿರುವ ಇವರು ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ. ಕಾಫಿ, ಕಾಳುಮೆಣಸು, ಅಡಕೆ, ಭತ್ತ ಪ್ರಮುಖ ಬೆಳೆಗಳಾಗಿದೆ. ಇದು ಅಲ್ಲದೆ ಹೂವು, ಹಣ್ಣಿನ ಗಿಡಗಳಿಗೂ ಪ್ರಾಧಾನ್ಯತೆ ನೀಡಿದ್ದಾರೆ. ಪ್ರತಿನಿತ್ಯ ತೋಟದ ಕೆಲಸದಲ್ಲಿ ನಿರತರಾಗಿ ಯಶಸ್ವಿ ರೈತ ಮಹಿಳೆ ಎನಿಸಿಕೊಂಡಿದ್ದಾರೆ.
ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ಇವರು ಮದುವೆಯ ನಂತರ ಗಂಡನ ಮನೆಗೆ ಬಂದ ರಾಧಾ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡರು. ತವರು ಮನೆಯಲ್ಲಿ ಗಳಿಸಿದ್ದ ಕೃಷಿ ಅನುಭವವನ್ನು ಇಲ್ಲಿ ಕಾರ್ಯರೂಪಕ್ಕೆ ಇಳಿಸಿದರು.
ಸುಮಾರು 5 ಎಕರೆಗೂ ಹೆಚ್ಚು ಭತ್ತ ಬೆಳೆಯುತ್ತಿದ್ದ ಇವರು ಇತ್ತೀಚಿನ ವರ್ಷದಲ್ಲಿ ಭತ್ತದ ಗದ್ದೆಯಲ್ಲಿ ಕೆರೆ ತೋಡಿಸಿದ್ದರಿಂದ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಭತ್ತದ ಕೃಷಿ ಬಿಡಬಾರದು ಎನ್ನುವ ಉದ್ದೇಶದಿಂದ ಈ ಬಾರಿ ಜೀರಿಗೆ ಸಣ್ಣ ಭತ್ತ ಬೆಳೆದಿದ್ದಾರೆ.
ವಿದೇಶದಲ್ಲಿ ಇರುವ ಪುತ್ರ ಅಲ್ಲಿ ಕೃಷಿಯಲ್ಲಿ ನಿರತರಾಗಿದ್ದಾರೆ. ಅಲ್ಲಿನ ಅನುಭವಗಳನ್ನು ಇಲ್ಲಿ ಧಾರೆ ಎರೆದು ವಿದೇಶಿ ಮಾದರಿಯನ್ನು ಇಲ್ಲಿ ಅನುಸರಿಸುತ್ತಿದ್ದಾರೆ.
ಕೃಷಿಯ ಜತೆಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ನಿರಂತರವಾಗಿ ಕಾಫಿಗೆ ನೀರು ಹಾಯಿಸುತ್ತಾ, ಕಾಲ ಕಾಲಕ್ಕೆ ಕಪಾತ್ ಮಾಡಿಸುತ್ತಾ ಕಾಫಿ ಗಿಡದ ಉತ್ತಮ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
3 ಬೃಹತ್ ಕೆರೆಗಳು: ಒಟ್ಟು ಮೂರು ಬೃಹತ್ ಕೆರೆಗಳನ್ನು ನಿರ್ಮಿಸಿದ್ದು, ಮೂರು ಕೆರೆಗಳಲ್ಲೂ ವಿವಿಧ ತಳಿಯ ಮೀನುಗಳನ್ನು ಸಾಕುತ್ತಿದ್ದಾರೆ. ಕಾಟ್ಲ, ರೋಹು, ಸಿಲ್ವರ್ ಕಾರ್ಪ್, ಕಾಮನ್ ಕಾರ್ಪ್, ಥಿಲೇಪಿಯಾ ಮೀನುಗಳು ಇವೆ. ಅವುಗಳನ್ನು ಚೆನ್ನಾಗಿ ಸಾಕಿ ವರ್ಷಾಂತ್ಯದಲ್ಲಿ ಮೀನನ್ನು ಹಿಡಿದು ಮಾರಾಟ ಮಾಡಿ ಅದರಿಂದಲೂ ಆದಾಯ ಗಳಿಸುತ್ತಿದ್ದಾರೆ.
ತಮ್ಮ ತೋಟಕ್ಕೆ ಇದೇ ಕೆರೆಗಳಿಂದ ನೀರನ್ನು ಹಾಯಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
3 ಕೊಟ್ಟಿಗೆ 20ಕ್ಕೂ ಹೆಚ್ಚು ದನಗಳು: ಹಸು ಸಾಕಣೆಯಲ್ಲಿಯೂ ಆಸಕ್ತಿ ತೋರಿರುವ ಇವರು 20ಕ್ಕೂ ಹೆಚ್ಚು ದೇಸಿ ಹಸುಗಳನ್ನು ಸಾಕುತ್ತಿದ್ದಾರೆ. 3 ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಒಂದು ಕೊಟ್ಟಿಗೆ ಗಬ್ಬದ ಹಸುಗಳ ಆರೈಕೆಗೆ, ಮತ್ತೊಂದು ಹಾಲು ಕರೆಯುವ ಹಸುಗಳನ್ನು ಕಟ್ಟಿಹಾಕಲು ಮತ್ತು ಮೂರನೆಯದ್ದು ಉಳಿದ ದನಗಳಿಗೆ. ಪ್ರಸ್ತುತ ಪ್ರತಿದಿನ 5-6 ಲೀಟರ್ ಹಾಲು ಸಿಗುತ್ತಿದ್ದು, ನೆರೆಕರೆಯವರಿಗೆ ಹಾಲು ನೀಡುತ್ತಿದ್ದಾರೆ. ಉಳಿದ ಹಾಲು ಮನೆಬಳಕೆಗೆ. ಜತೆಯಲ್ಲಿ ಬೆಣ್ಣೆ, ತುಪ್ಪವನ್ನೂ ಮಾಡಿಕೊಳ್ಳುತ್ತಾರೆ. ಹಸು ಸಾಕಣೆಯಿಂದ ಕೇವಲ ಗೊಬ್ಬರ ಮಾತ್ರವಲ್ಲದೆ ಹಾಲು, ತುಪ್ಪದಿಂದಲೂ ಲಾಭ ಗಳಿಸಬಹುದು ಎನ್ನುತ್ತಾರೆ ರಾಧಾ.
40 ಕ್ಕೂ ಹೆಚ್ಚು ಡ್ರಾೃಗನ್ ಫ್ರೂಟ್ ಗಿಡಗಳು: ತೋಟದ ಅಂಚಿನಲ್ಲಿ 40ಕ್ಕೂ ಹೆಚ್ಚು ಡ್ರಾೃಗನ್ ಫ್ರೂಟ್ ಗಿಡಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ. ಉತ್ತಮವಾಗಿ ಬೆಳೆದ ಗಿಡಗಳಿಂದ ಕಳೆದ ವರ್ಷ ಉತ್ತಮ ಆದಾಯ ಗಳಿಸಿದ್ದಾರೆ. ಆಧುನಿಕ ರೀತಿಯಲ್ಲಿ ಕಂಬಗಳನ್ನು ಅಳವಡಿಸಿ ಡ್ರಾೃಗನ್ ಫ್ರೂಟ್ ಬೆಳೆದಿದ್ದಾರೆ. ಈ ಬಾರಿಯೂ ಉತ್ತಮ ಫಸಲಿನ ನಿರೀಕ್ಷೆ ಇದೆ.
ತೋಟಕ್ಕೆ ಜೀವಾಮೃತ ಪೂರೈಕೆ: ಸುಮಾರು 20 ಎಕರೆ ತೋಟಕ್ಕೆ ಮಣ್ಣಿನ ಉತ್ತಮ ಆರೈಕೆಗೆ ಜೀವಾಮೃತ ಬಳಕೆ ಮಾಡುತ್ತಿದ್ದಾರೆ. ಏಕಕಾಲದಲ್ಲಿ 16 ಡ್ರಂಗಳಲ್ಲಿ ಜೀವಾಮೃತ ತಯಾರು ಮಾಡಿ ತೋಟಕ್ಕೆ ಸಿಂಪಡಣೆ ಮಾಡುತ್ತಾರೆ. ಇದರಿಂದ ಮಣ್ಣಿನಲ್ಲಿ ಎರೆಹುಳುಗಳ ಅಭಿವೃದ್ಧಿ ಉತ್ತಮ ರೀತಿಯಲ್ಲಿ ಆಗಿ. ಮಣ್ಣು ಆರೋಗ್ಯಯುತವಾಗಿರುತ್ತದೆ. ರೊಟೇಶನಲ್ ರೀತಿಯಲ್ಲಿ 20 ಎಕರೆಗೆ ಜೀವಾಮೃತ ತಯಾರು ಮಾಡುತ್ತಾರೆ. ಜೀವಾಮೃತ ನೀಡಿರುವ ತೋಟ ಉಳಿದ ತೋಟಕ್ಕಿಂತ ಉತ್ತಮ ರೀತಿಯಲ್ಲಿ ಇಳುವರಿ ನೀಡುತ್ತಾ ಇದೆ.
ಹೂತೋಟದಲ್ಲಿಯೂ ಆಸಕ್ತಿ ಹೊಂದಿರುವ ರಾಧಾ ಮನೆಯ ಸುತ್ತಲೂ ಅತ್ಯಾಕರ್ಷಕ ಹೂಗಿಡಗಳನ್ನು ಬೆಳೆಸಿಕೊಂಡಿದ್ದಾರೆ. ಬೊನ್ಸಾಯಿ ಗಿಡಗಳ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಇವರ ಸಂಗ್ರಹದಲ್ಲಿ ನೂರಾರು ಬೊನ್ಸಾಯಿ ಗಿಡಗಳು ಇದೆ. ಸುಮಾರು ಮೂವತ್ತು ವರ್ಷ ಮೇಲ್ಪಟ್ಟ ಗಿಡಗಳು ಇದೆ.
ಮೊದಲು ಇವರ ತೋಟಕ್ಕೆ ಆನೆಗಳ ಕಾಟ ಅಧಿಕವಾಗಿತ್ತು. ತೋಟಕ್ಕೆ ನುಗ್ಗುತ್ತಿದ್ದ ಕಾಡಾನೆಗಳು ಫಸಲನ್ನು ಹಾಳು ಮಾಡುತ್ತಾ ಇದ್ದವು. ಇದರಿಂದ ಕಾರ್ಮಿಕರೂ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ತೋಟಕ್ಕೆ ಸಂಪೂರ್ಣ ಸೋಲಾರ್ ಅಳವಡಿಸಲಾಗಿದ್ದು, ಆನೆಗಳ ಕಾಟ ಕಡಿಮೆಯಾಗಿದೆ. ಕಾರ್ಮಿಕರೂ ನೆಮ್ಮಯಿಂದ ತೋಟಕ್ಕೆ ತೆರಳುವಂತಾಗಿದೆ.