ಕಿಸಾನ್ ಸಮ್ಮಾನ್ ಹಣ ಮರಳಿಸಿದ ಫಲಾನುಭವಿಗಳು

PM-Kisan
Published on

ಹಾವೇರಿ: ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಿ ಇದೀಗ ಸರ್ಕಾರ ಕ್ರಮ ಕೈಗೊಳ್ಳಬಹುದಾದ ಭೀತಿ ಎದುರಿಸುತ್ತಿರುವ ಜಿಲ್ಲೆಯಲ್ಲಿನ ಐವರು ಫಲಾನುಭವಿಗಳು ತಮ್ಮ ನೋಂದಣಿಯನ್ನು ರದ್ದುಗೊಳಿಸಲು ಕೋರಿ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯಿಂದ ಈವರೆಗೆ ಪಡೆದ 48 ಸಾವಿರ ರೂ.ಗಳನ್ನು ಡಿಡಿ ಮೂಲಕ ಮರಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,89,000 ರೈತರು ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಯಾದ ಪ್ರತಿ ರೈತರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಸಹಾಯಧನ ಸಿಗುತ್ತದೆ. ಈ ಯೋಜನೆಯ ಅರ್ಹತೆ ಪಡೆಯಲು ಸರ್ಕಾರವು ನಿಯಮಗಳನ್ನು ಸಡಿಲಿಕೆ ಮಾಡಿ ಕನಿಷ್ಠ ಅರ್ಧ ಎಕರೆ ಕೃಷಿ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರಿಗೂ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿತ್ತು. ಅಲ್ಲದೆ, ಕೆಲವೊಂದು ಷರತ್ತುಗಳನ್ನು ರೂಪಿಸಿತ್ತು. ಇದರಲ್ಲಿ ಪ್ರಮುಖವಾಗಿ ಸಹಾಯಧನ ಪಡೆಯುವ ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಹಾಗೂ 10 ಸಾವಿರ ರೂ.ಗಳ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರಬಾರದು ಎಂಬುದು ಸೇರಿತ್ತು.

ಇತ್ತೀಚೆಗೆ ಸರ್ಕಾರವು ಆದಾಯ ತೆರಿಗೆ ಪಾವತಿಸುವ ರೈತರ ಪಟ್ಟಿ ಮಾಡುತ್ತಿದೆ. ಅನರ್ಹರು ಇದ್ದರೆ ನೋಟಿಸ್ ನೀಡಲು ಸೂಚನೆ ನೀಡಿದೆ. ಈಗಾಗಲೇ ತಮಿಳುನಾಡಿನಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಗಮನಿಸಿದ ಜಿಲ್ಲೆಯ 5 ರೈತರು ತಾವು ಆದಾಯ ತೆರಿಗೆ ಪಾವತಿದಾರರಾಗಿದ್ದು, ‘ಕಣ್ತಪ್ಪಿನಿಂದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿಯಾಗಿದೆ. ನಮ್ಮ ನೋಂದಣಿ ರದ್ದುಗೊಳಿಸಿ. ಈವರೆಗೆ ನಾವು ಯೋಜನೆಯಿಂದ ಪಡೆದಿರುವ ಹಣವನ್ನು ಮರಳಿಸಿದ್ದೇವೆ’ ಎಂದು ವಿನಂತಿಸಿ ಅರ್ಜಿ ಸಲ್ಲಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ

ಕೃಷಿ ಇಲಾಖೆಯು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿಯಾದ ರೈತರ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಿದ್ದು, ತೆರಿಗೆ ಪಾವತಿಸುವ ರೈತರ ಪಟ್ಟಿ ನೀಡುವಂತೆ ಕೇಳಿತ್ತು. ಆ ಪಟ್ಟಿಯನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆ ಕೃಷಿ ಇಲಾಖೆಗೆ ನೀಡಿದ್ದು, ಜಿಲ್ಲಾವಾರು ರೈತರ ಮಾಹಿತಿಯನ್ನು ಕೃಷಿ ಇಲಾಖೆ ಸಿದ್ಧಪಡಿಸುತ್ತಿದೆ. ಜಿಲ್ಲಾವಾರು ಪಟ್ಟಿ ಸಿದ್ಧವಾದ ಕೂಡಲೆ ಅನರ್ಹ ರೈತರಿಗೆ ನೋಟಿಸ್ ಹೋಗುವುದು ಖಾತ್ರಿ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿಯಾದ 5 ರೈತರು ತಾವು ಆದಾಯ ತೆರಿಗೆ ಪಾವತಿದಾರರಿದ್ದು, ಕಣ್ತಪ್ಪಿನಿಂದ ಸಹಾಯಧನ ಪಡೆಯಲು ನೋಂದಣಿ ಮಾಡಿದ್ದೇವೆ. ಇದನ್ನು ರದ್ದುಗೊಳಿಸಿ ಎಂದು ಈವರೆಗೆ ಪಡೆದ ಹಣವನ್ನು ಮರಳಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಇಲಾಖೆಯಿಂದಲೇ ಅನರ್ಹರನ್ನು ಪತ್ತೆ ಹಚ್ಚಿಲ್ಲ. ಅನರ್ಹರಿಗೆ ನೋಟಿಸ್ ನೀಡುವಂತೆ ಸೂಚನೆಯೂ ಬಂದಿಲ್ಲ. | ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net