

ಚನ್ನಪಟ್ಟಣ: ಇದೇನು ಹೆದ್ದಾರಿಯೋ ಅಥವಾ ನದಿಯೋ?. ಇಂತಹದೊಂದು ಅನುಮಾನ ಮಳೆಬಂದಾಗ ನಗರದ ಗಾಂಧಿಭವನದ ಸಮೀಪ ಮೂಡುತ್ತಿದೆ. ಭವನದ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗ ಹೆದ್ದಾರಿಯಲ್ಲಿ ಮಂಡಿಯುದ್ದ ನೀರು ನಿಲ್ಲುವುದು ಇದಕ್ಕೆ ಕಾರಣವಾಗಿದೆ.
ಹೌದು, ನಗರದ ಗಾಂಧಿಭವನದ ಬಳಿಯ ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಮಳೆ ಬಂದಾಗ ಸಾಕಷ್ಟು ಪ್ರಮಾಣದಲ್ಲಿ ನೀರು ನಿಲುಗಡೆಯಾಗುತ್ತಿದ್ದು, ಮಳೆಬಂದಾಗ ಮಿನಿಕೆರೆಯಂತೆ ಬದಲಾಗುತ್ತಿದೆ. ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆ ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಅವ್ಯವಸ್ಥೆ ಉಂಟಾಗಿದೆ. ಮಳೆಬಂದ ಸಮಯದಲ್ಲಿ ಹೊಸದಾಗಿ ನಗರ ಪ್ರವೇಶಿಸುವವರು ಅರೆಣ ಈ ಜಾಗದಲ್ಲಿ ಗಲಿಬಿಲಿಯಾಗುವ ಮಟ್ಟಿಗೆ ನೀರು ನಿಲುಗಡೆಯಾಗುತ್ತಿದೆ.
ಕೊಳಚೆ ನೀರಿನಲ್ಲೆ ಓಡಾಟ!: ಮಳೆಬಂದಾಗ ನೀರಿನ ಜತೆಗೆ ಕೊಳಚೆ ನೀರು ನಿಲ್ಲುತ್ತಿದ್ದು, ಹೆದ್ದಾರಿಯ ಒಂದು ಬದಿ ಸಂಪೂರ್ಣವಾಗಿ ಮುಳುಗಡೆಯಾಗುತ್ತಿದೆ. ಪ್ರಯಾಣಿಕರು ಕೊಳಚೆಯಲ್ಲೆ ಓಡಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದ್ವಿಚಕ್ರ ವಾಹನ ಸವಾರರು ಹರಸಾಹಸದಿಂದ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಅವ್ಯವಸ್ಥೆ ಹೇಳತೀರದಾಗಿದ್ದು, ಇದಕ್ಕೆ ಕಾರಣ ಆದವರಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಪೆಟ್ರೋಲ್ ಬಂಕ್ನಿಂದ ಭವನದವರೆಗೂ ನೀರು ನಿಲ್ಲುತ್ತಿದ್ದು, ಪ್ರಯಾಣಿಕರ ಸ್ಥಿತಿ ಅತಂತ್ರವಾಗಿದೆ.
ಅವ್ಯವಸ್ಥೆ ಸರಿಪಡಿಸಿದರೂ, ಸರಿಯಾಗಿಲ್ಲ: ನಗರದಲ್ಲಿ ಹಾದುಹೋಗಿರುವ ಬೆಂಗಳೂರು, ಮೈಸೂರು ಹೆದ್ದಾರಿಯ ಹಲವು ಕಡೆ ಈ ಸಮಸ್ಯೆ ತಾಂಡವವಾಡುತ್ತಿದೆ. ನಗರದ ಶೇರ್ವಾ ಸರ್ಕಲ್, ಅಂಬೇಡ್ಕರ್ ಭವನ ಹಾಗೂ ನಗರದ ಗಾಂಧಿಭವನದ ಬಳಿ ಹಲವು ವರ್ಷಗಳಿಂದ ಹೆದ್ದಾರಿಯಲ್ಲಿ ನೀರು ನಿಲ್ಲುವ ಸಮಸ್ಯೆ ಇದೆ. ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಹರಿದುಹೋಗಲು ಇರುವ ಅವೈಾನಿಕ ವಿಧಾನವೇ ಇದಕ್ಕೆ ಕಾರಣವಾಗಿದೆ. ಹೆದ್ದಾರಿ ಮಧ್ಯೆ ಹಾದುಹೋಗಿರುವ ರಾಜಕಾಲುವೆಗಳು ಸಣ್ಣದಾಗಿದ್ದು, ಅವುಗಳಲ್ಲಿ ತ್ಯಾಜ್ಯ ಸೇರಿದಂತೆ ಇನ್ನಿತರ ವಸ್ತುಗಳಿಂದ ಮುಚ್ಚಿಕೊಳ್ಳುವ ಕಾರಣ ಈ ಸಮಸ್ಯೆ ಬಿಗಾಡಾಯಿಸಲು ಪ್ರಮುಖ ಕಾರಣ ಎನ್ನಬಹುದಾಗಿದೆ.
ಸಮಸ್ಯೆ ಪರಿಹರಿಸಲು ತಾತ್ಕಾಲಿಕ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆ ಕಾರಣದಿಂದ ಶೇರ್ವಾ ಸರ್ಕಲ್ ಮತ್ತು ಅಂಬೇಡ್ಕರ್ ಭವನದ ಬಳಿ ಸಮಸ್ಯೆ ಕೊಂಚ ಕಡಿಮೆಯಾಯಿತು. ಆದರೆ, ಗಾಂಧಿ ಭವನದ ಬಳಿ ಮಾತ್ರ ಇದು ಜೀವಂತವಾಗಿದ್ದು, ಸಮಸ್ಯೆಗೆ ಮುಕ್ತಾಯ ಯಾವಾಗ? ಎಂಬುದು ವಾಹನ ಸವಾರರ ಪ್ರಶ್ನೆಯಾಗಿದೆ.
ರಾಜಕಾಲುವೆ ಒತ್ತುವರಿ ಎಫೆಕ್ಟ್?: ನಗರದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಹಿಂದೆ ಇದ್ದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸದ ಕಾರಣ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಇದಲ್ಲದೇ ರಾಜಕಾಲುವೆಗಳ ಒತ್ತುವರಿಯೂ ಸಮಸ್ಯೆಗೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗ್ಗೆ ರ್ನಿಲಕ್ಷ$್ಯವಹಿಸುತ್ತಿದ್ದು, ಜನತೆ ಹೆದ್ದಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಇದರ ಬಗ್ಗೆ ಆಸಕ್ತಿ ವಹಿಸಿ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ಗಾಂಧಿ ಭವನದ ಸಮೀಪ ಇರುವ ಪೆಟ್ರೋಲ್ ಬಂಕ್ ಮುಂಭಾಗ ಮಳೆ ಬಂದಾಗ ಹೆಚ್ಚಿನ ನೀರು ನಿಲ್ಲುತ್ತಿದ್ದು, ಆ ಜಾಗದಲ್ಲಿ ಸಂಚರಿಸುವುದು ದುಸ್ತರ ಎನಿಸಿದೆ. ಕೊಳಚೆ ನೀರಿನಲ್ಲಿ ಸ್ನಾನ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಸಮಸ್ಯೆ ನಗರಕ್ಕೆ ಕಪ್ಪುಚುಕ್ಕಿ ಎಂದರೆ ತಪ್ಪಾಗಲಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. > ಸಾಗರ್ ನಾಗವಾರ, ಚನ್ನಪಟ್ಟಣ. ಹೆದ್ದಾರಿಯ ಗಾಂಧಿ ಭವನದ ಬಳಿ ಒಂದು ಕಡೆಯಿಂದ ಮತ್ತೊಂದು ಕಡೆನೀರು ಹರಿದುಹೋಗಲು ಸಮಸ್ಯೆಯಾಗಿರುವ ಕಾರಣ ಸಮಸ್ಯೆ ಉದ್ಭವವಾಗಿದೆ. ಈಗಾಗಲೇ ಈ ಬಗ್ಗೆ ಹೆದ್ದಾರಿ ಅಧಿಕಾರಿಗಳ ಗಮನಸೆಳೆಯಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ಮತ್ತೊಮ್ಮೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. > ಮಹೇಂದ್ರ, ಪೌರಯುಕ್ತ, ನಗರಸಭೆ ಚನ್ನಪಟ್ಟಣ.