ಬೇಲೂರು-ಸಕಲೇಶಪುರ ರಸ್ತೆ ಸಂಚಾರ ತಡೆ

ಬೇಲೂರು-ಸಕಲೇಶಪುರ ರಸ್ತೆ ಸಂಚಾರ ತಡೆ
Published on

ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶ ಪಡಿಸುತ್ತಿರುವ ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಸೋಮವಾರ ರೈತ ಸಂಘದ ನೇತೃತ್ವದಲ್ಲಿ ಕೋಗಿಲಮನೆ ಗಡಿಯಲ್ಲಿ ಬೇಲೂರು-ಸಕಲೇಶಪುರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಶಾಸಕರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಡಿಸಿಎಫ್ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಹಾಗೂ ವಲಯ ಅರಣ್ಯಾಧಿಕಾರಿ ಯತೀಶ್, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಕಾಡಾನೆಗಳನ್ನು ತಕ್ಷಣದಿಂದಲೇ ಓಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಲಿಖಿತವಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘದ ಭೋಗ ಮಲ್ಲೇಶ್ ಮಾತನಾಡಿ, ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಕಳೆದ ಮೂರು ತಿಂಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಈ ಬಗ್ಗೆ ಎಷ್ಟು ಬಾರಿ ಮನವಿಮಾಡಿದರು ಅಧಿಕಾರಿಗಳು, ಶಾಸಕರು ಗಮನ ಹರಿಸುತ್ತಿಲ್ಲ. ಶೀಘ್ರ ಆನೆ ಕಾರ್ಯಾಚರಣೆ ನಡೆಸದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.

ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ತಾಲೂಕಿನಲ್ಲಿ ಮಿತಿಮಿರಿದೆ. ಹಿಂದೆ 20 ಇದ್ದ ಆನೆಗಳು ಇಂದು 50 ದಾಟಿವೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ. ಅಧಿಕಾರಿಗಳು ಕೇವಲ ಭರವಸೆಗೆ ಸೀಮಿತರಾಗಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕರು ಅಧಿಕಾರಿಗಳ ಮತ್ತು ರೈತರ ಸಭೆ ಕರೆದು ಚರ್ಚಿಸಿ ಒಂದು ವಾರದೊಳಗೆ ಆನೆಗಳನ್ನು ಓಡಿಸುವುದಾಗಿ ತಿಳಿಸಿದ್ದರು. ಆದರೆ, ಇದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸರ್ಕಾರಗಳು ರೈತರ ಜೀವ ಮತ್ತು ಜೀವನದ ಜತೆ ಚೆಲ್ಲಾಟವಾಡುತ್ತಿವೆ ಎಂದು ದೂರಿದರು.

ಕೋಗಿಲಮನೆ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕಾಡಾನೆಗಳ ಉಪಟಳ ತಪ್ಪಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆನೆ ಕಾರಿಡಾರ್ ನಿರ್ಮಿಸಬೇಕು. ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದರು.

ಪ್ರತಿಭಟನೆಯಲ್ಲಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಮೋಹನ್, ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್, ಕರವೇ ಉಪಾಧ್ಯಕ್ಷ ಕೋಗಿಲಮನೆ ಕುಮಾರ್, ಮುಖಂಡರಾದ ಬಸವರಾಜು, ಶಿವೇಗೌಡ ಸೇರಿದಂತೆ ರೈತ ಮುಖಂಡರು ಹಾಗೂ ವಿವಿಧ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net