

ಬೇಲೂರು: ಕಳೆದ ವರ್ಷದಲ್ಲಿ ನಮ್ಮ ಕ್ಲಬ್ ಸದಸ್ಯರು ನೀಡಿದ ಸಹಕಾರ ಮತ್ತು ಬೆಂಬಲದಿಂದ ಹಲವಾರು ಸಮಾಜಮುಖಿ, ಜನಪರ ಕೆಲಸಗಳನ್ನು ಮಾಡಿದ ಹಿನ್ನೆಲೆಯಲ್ಲಿ ಬೇಲೂರು ಲಯನ್ಸ್ ಕ್ಲಬ್ ಜಿಲ್ಲೆಗೆ ತೃತೀಯ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್‌ನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷರಾದ ನಂತರ ಎಲ್ಲ ಸದಸ್ಯರೂ ನೀಡಿದ ಸಹಕಾರ ಮರೆಯುವುದಿಲ್ಲ. ಉಚಿತ ಆರೋಗ್ಯ ಶಿಬಿರ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ ಇನ್ನಿತರ ರೋಗಗಳ ಬಗ್ಗೆಯೂ ಉಚಿತ ತಪಾಸಣೆ ಕಾರ್ಯಕ್ರಮ ಮತ್ತು ಚಿಕಿತ್ಸೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಆರೋಗ್ಯ ಶಿಬಿರ ನಡೆಸಲಾಗುವುದು. ಈಗಾಗಲೇ ಶಾಲಾ, ಕಾಲೇಜುಗಳಲ್ಲಿ ಮತ್ತು ಸಮುದಾಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಪರಿಸರ, ಶಿಕ್ಷಣ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನಮ್ಮ ಅವಧಿಯಲ್ಲಿ ಲಯನ್ಸ್ ಭವನ ಲೋಕಾರ್ಪಣೆಯಾಗಿದ್ದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನದಂದು ಲಯನ್ಸ್ ಭವನದಲ್ಲಿ ಶಾಶ್ವತ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ರೂಪಿಸಲು ಈಗಿನ ಅಧ್ಯಕ್ಷರೊಂದಿಗೆ ಕೈಜೋಡಿಸಲಾಗುವುದು ಎಂದರು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲಿ ಅತ್ಯಂತ ಅಗ್ರಮಾನ್ಯ ಸಂಸ್ಥೆಯಲ್ಲಿ ಕಳೆದ 25 ವರ್ಷದಿಂದ ಅಧ್ಯಕ್ಷರಾದವರ ಕಾಲಘಟ್ಟದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ನಮ್ಮ ಕ್ಲಬ್ ಆರೋಗ್ಯ, ಪರಿಸರ, ಶಿಕ್ಷಣ ಸೇರಿದಂತೆ ಇತರ ಸೇವಾ ಚಟುವಟಿಕೆಗಳನ್ನು ಮಾಡಿದೆ. ಒಂದು ವರ್ಷದ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಚಂದ್ರಮೌಳಿ ಅವರ ಸೇವೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಸಾಥ್ ನೀಡಿದ ಪದಾಧಿಕಾರಿಗಳು ಮತ್ತು ಸದಸ್ಯರ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಹಾಗೂ ಈಗ ಅಧ್ಯಕ್ಷರಾಗಿರುವ ತಾರಾಮಣಿ ಸುರೇಶ್ ಲಯನ್ಸ್ ಕ್ಲಬನ್ನು ಉತ್ತಮ ಮಟ್ಟದಲ್ಲಿ ಮುಂದೆ ಸಾಗಿಸುವ ಭರವಸೆ ಇದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ.ಬಿ.ಸುರೇಶ್ ಮಾತನಾಡಿ, ಬೇಲೂರಿನ ಲಯನ್ಸ್ ಕ್ಲಬ್ ಈಗಾಗಲೇ ಉತ್ತಮ ಸೇವಾ ಚಟುವಟಿಕೆಗಳನ್ನು ನಡೆಸಿದ್ದರಿಂದ ತೃತೀಯ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದ್ದರಿಂದ ಎಲ್ಲರೂ ಅಧ್ಯಕ್ಷರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದರು.
ಲಯನ್ಸ್ ಕ್ಲಬ್‌ನ ಮುಕ್ತಿಯಾರ್ ಅಹಮದ್, ಸಂತೋಷ, ಮಾಜಿ ಅಧ್ಯಕ್ಷರಾದ ಪೂವಯ್ಯ, ಬಿ.ಸಿ.ಉಮೇಶ್, ವೈ.ಬಿ.ಸುರೇಶ್ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಹಾಲಪ್ಪ. ಸ್ವರ್ಣ, ಹೇಮಾಂತ್, ತೌಫಿಕ್, ಕುಮಾರ್, ವಿನೋದ್, ಗೀತಾ, ಕಾವ್ಯ ಪೂವಯ್ಯ ಇನ್ನಿತರರಿದ್ದರು.