

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಏಳು ವರ್ಷಗಳ ಹಿಂದೆ ಪಟ್ಟಣಕ್ಕೆ ನೀಡಿದ 10 ಕೋಟಿ ರೂ. ಅನುದಾನದಲ್ಲಿ 33 ಕಾಮಗಾರಿ ನಡೆದಿದ್ದು, ಬಹುತೇಕ ಕಾಮಗಾರಿ ಕಳಪೆಯಾಗಿವೆ. ಕಾಮಗಾರಿಗಳಿನ್ನೂ ಬಾಕಿಯಿದ್ದು, ಕೆಆರ್‌ಐಡಿಎಲ್ ಮತ್ತು ನಿರ್ಮಿತಿ ಸಂಸ್ಥೆ ವಿರುದ್ಧ ಪ.ಪಂ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಕುರಿತು ಮರುತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಶಾಸಕರು ಸೂಚಿಸಿದರು.
ಪ.ಪಂ.ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪ.ಪಂ. ಸಭಾಭವನದಲ್ಲಿ ಪ.ಪಂ ಸಾಮಾನ್ಯ ಸಭೆ ಸೋಮವಾರ ಆಯೋಜನೆಗೊಂಡಿತು.
ಕೆಆರ್‌ಐಡಿಎಲ್, ನಿರ್ಮಿತಿ ಕಾಮಗಾರಿ ವಿಚಾರವಾಗಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಪ.ಪಂ ಸದಸ್ಯ ಜಗದೀಶ್ ಅಸಮಾಧಾನ ಹೊರಹಾಕಿ, ಅಧಿಕಾರಿ ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮಧ್ಯ ಪ್ರವೇಶಿಸಿದ ಶಾಸಕ, ಕೆಲಸ ಕಳಪೆಯಾಗಿದ್ದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರುವ ಎಂದರು.
ಮೂಡ ಸಮಸ್ಯೆ ಕುರಿತು ಈ ಬಾರಿಯೂ ವಿಚಾರ ಮುನ್ನೆಲೆಗೆ ಬಂದಿದ್ದು, ಮಧ್ಯಪ್ರವೇಶಿಸಿದ ಶಾಸಕ ಹರೀಶ್ ಪೂಂಜಾ ಈ ಕುರಿತು ಶೀಘ್ರವೇ ಪೌರಾಡಳಿತ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಆಸ್ಪತ್ರೆ ಬೆಡ್‌ಗೆ ಸೊಳ್ಳೆ ಪರದೆ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿರುವ 8 ಹಾಸಿಗೆ ಪೈಕಿ ಒಂದು ಹಾಸಿಗೆಗಷ್ಟೇ ಸೊಳ್ಳೆ ಪರದೆಯಿದೆ. ತಾಲೂಕಿನಲ್ಲಿ ಡೆಂಘೆ ಪ್ರಕರಣಗಳೂ ಹೆಚ್ಚುತ್ತಿದ್ದು, ಲಭ್ಯವಿರುವ ಎಲ್ಲ ಹಾಸಿಗೆಗೆ ಸೊಳ್ಳೆ ಪರದೆ ಅಳವಡಿಸಬೇಕು ಎಂದು ಸದಸ್ಯ ಜಗದೀಶ್ ಆಗ್ರಹಿಸಿದರು. ತಕ್ಷಣ ಅಳವಡಿಸುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಗೌರವ ಧನ ಹೆಚ್ಚಳಕ್ಕೆ ಆಗ್ರಹ: ಪ.ಪಂ.ಸದಸ್ಯರು ಆರ್ಥಿಕವಾಗಿ ಅಸದೃಢರಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಗೌರವಧನ ಹೆಚ್ಚಳಗೊಳಿಸುವಂತೆ 224 ಶಾಸಕರ ಪೈಕಿ ಯಾವೊಬ್ಬ ಶಾಸಕನೂ ಧ್ವನಿ ಎತ್ತಿಲ್ಲ ಎಂದು ಸದಸ್ಯ ಜಗದೀಶ್ ಬೇಸರ ಹೊರಹಾಕಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ಮುಖ್ಯಾಧಿಕಾರಿ ರಾಜೇಶ್ ಕೆ. ಸಹಿತ ಸದಸ್ಯರು ಉಪಸ್ಥಿತರಿದ್ದರು.
ಸಂತೆಕಟ್ಟೆ ಬಾಡಿಗೆದಾರರ ವಿರುದ್ಧ ಕ್ರಮ
ಸಂತೆಕಟ್ಟೆ ಒಳಭಾಗದಲ್ಲಿರುವ ಒಣಮೀನು ಮಾರಾಟದ ಅಂಗಡಿ ಸ್ಥಳಾಂತರವಾಗಬೇಕಿದೆ. ಹಸಿಮೀನು ಮಾರಾಟ ಮಳಿಗೆಯ ಗೋಡೆ ತೆರವುಗೊಳಿಸುವ ಕುರಿತು ಪ.ಪಂ. ಮಾಹಿತಿ ನೀಡದೆ ಬಾಡಿಗೆದಾರರು ಏಕಾಏಕಿ ಗೋಡೆ ತೆರವುಗೊಳಿಸಿದ್ದು, ಈ ಕಾರ್ಯ ಕಾನೂನು ಬಾಹಿರವಾಗಿದೆ. ಅವರ ಪರವಾನಿಗೆ ರದ್ದುಗೊಳಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ರುದ್ರಭೂಮಿ ಅಭಿವೃದ್ಧಿಗೆ ನೆರವು
ಪಟ್ಟಣ ವ್ಯಾಪ್ತಿಯಲ್ಲಿರುವ ಹಿಂದು ರುದ್ರಭೂಮಿ ಅಭಿವೃದ್ಧಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಕೊಡಮಾಡಿದ 2.50 ಲಕ್ಷ ರೂ. ಸಹಾಯಧನದ ಚೆಕ್ ಶಾಸಕರ ಮೂಲಕ ಪ.ಪಂ. ಅಧ್ಯಕ್ಷ ಜಯಾನಂದ ಗೌಡರಿಗೆ ಹಸ್ತಾಂತರಿಸಲಾಯಿತು. ಯೋಜನಾಧಿಕಾರಿ ಯಶೋದರ, ಶುಶಾಂತ್, ಬೆಳ್ತಂಗಡಿ ರವಿ, ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆರ್, ಒಕ್ಕೂಟ ಪದಾಧಿಕಾರಿಗಳಾದ ದಯಾನಂದ್ ಕೋಟ್ಯಾನ್, ಯಶೋದಾ ಇದ್ದರು.