ಬೆಳ್ಳಾಳೆ ಗ್ರಾಮಸ್ಥರ ಪ್ರತಿಭಟನೆ

11-pnp 2
Published on

ಪಾಂಡವಪುರ: ತಾಲೂಕಿನ ಬೆಳ್ಳಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಶ್ರಾಂತಿ ಕೊಠಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಬಿಲ್ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಕೆಲ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.


ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಮಾಯಿಸಿದ ಕೆಲ ಗ್ರಾಮಸ್ಥರು ಅಕ್ರಮಮವಾಗಿ ಬಿಲ್ ಪಡೆದುಕೊಂಡಿರುವ ಗುತ್ತಿಗೆದಾರ ಹಾಗೂ ಇದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದರು.


ಜಿಲ್ಲಾ ಪಂಚಾಯಿತಿಯ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಗಿಗಳ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ 4.5 ಲಕ್ಷ ರೂ. ಅನುದಾನ ನೀಡಲಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದೆ ಮೊತ್ತವನ್ನು ಸಂಪೂರ್ಣ ಪಡೆದುಕೊಂಡಿದ್ದಾನೆ. ಕಾಮಗಾರಿ ಯಾವ ಹಂತದಲ್ಲಿದೆ, ಅದರ ಗುಣಮಟ್ಟ ಪರಿಶೀಲಿಸದೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗುತ್ತಿಗೆದಾರನಿಗೆ ಸಂಪೂರ್ಣ ಅನುದಾನ ಪಾವತಿಸಿದ್ದಾರೆ. ಕಟ್ಟಡವೇ ಪೂರ್ಣಗೊಳ್ಳದೆ ಬಿಲ್ ಪಡೆದಿರುವ ಗುತ್ತಿಗೆದಾರ ಹಾಗೂ ಜಿಪಂ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಒಂದು ವೇಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ವಕೀಲ ಚಂದನ್, ಲೋಹಿತ್, ರಾಕೇಶ್, ಚೇತನ್, ಪಾಪೇಗೌಡ, ಸುಧಾಕರ, ಬಸವೇಗೌಡ, ಶಂಕರಚಾರಿ, ಹರೀಶ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net