

ಬಳ್ಳಾರಿ: ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ನಗರದ ವಿಮ್ಸ್ ಮೈದಾನದಲ್ಲಿ ಜಿಲ್ಲಾಡಳಿತ ಮಂಗಳವಾರ ಏರ್ಪಡಿಸಿದ್ದ 77ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಕೀಯರ ಆಡಳಿತದಿಂದ ದೇಶ ಬಿಡುಗಡೆಗೊಂಡ ಈ ಸುದಿನದಂದು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನಗೈದ ಹೋರಾಟಗಾರರನ್ನು ಸ್ಮರಿಸಬೇಕು. ಅಹಿಂಸಾ ಹೋರಾಟದ ಜಾಗೃತಿ ಮೂಡಿಸಲು 1921ರ ಅ.1ರಂದು ಮಹಾತ್ಮ ಗಾಂಧೀಜಿ ಬಳ್ಳಾರಿಗೆ ಬಂದು ಎಂಟು ಗಂಟೆ ತಂಗಿದ್ದರು. ಬಾಲ ಗಂಗಾಧರ ತಿಲಕ್‌ರಂತಹ ರಾಷ್ಟ್ರ ನಾಯಕರು ಭೇಟಿ ನೀಡಿದ್ದು ರೋಚಕದ ಸಂಗತಿ ಎಂದರು. ಸ್ವಾತಂತ್ರ್ಯೋತ್ಸವನ್ನು ಕೇವಲ ಸಂಭ್ರಮಿಸಿದರೆ ಸಾಲದುತನು, ಮನ, ಧನ, ಸಮರ್ಪಣ ಮನೋಭಾವದಿಂದ ದೇಶದ ಪ್ರಗತಿ, ರಕ್ಷಣೆಗೆ ಕಂಕಣ ಬದ್ಧರಾಗಬೇಕು. ಯುವ ಜನರಲ್ಲಿ ದೇಶಭಕ್ತಿ ಜತೆ ವಿಶ್ವ ಮಾನವ ಸಂದೇಶ ಸಾರಬೇಕಾಗಿದೆ ಎಂದು ಹೇಳಿದರು.
ಡಿಎಂಎಫ್ ಅನುದಾನ ಸದ್ಬಳಕೆ: ರಾಜ್ಯ ಸರ್ಕಾರ 2016ನೇ ಸಾಲಿನಲ್ಲಿ ಡಿಎಂಎಫ್ ನಿಯಮಗಳಂತೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 2270.46 ಕೋಟಿ ರೂ. ವಂತಿಗೆಯಾಗಿ ಸಂಗ್ರಹವಾಗಿದೆ. ಆರು ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ಒಟ್ಟು 1593.68 ಕೋಟಿ ರೂ. ಅನುಮೋದಿಸಿ, ಒಟ್ಟು 1407 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 597.93 ಕೋಟಿ ರೂ. ವೆಚ್ಚ ಮಾಡಲಾಗಿದೆ. 989 ಕಾಮಗಾರಿಗಳು ಪೂರ್ಣಗೊಂಡಿದ್ದು, 169 ಪ್ರಗತಿಯಲ್ಲಿದ್ದರೆ 77 ಟೆಂಡರ್ ಹಂತದಲ್ಲಿವೆ ಎಂದು ಸಚಿವ ನಾಗೇಂದ್ರ ತಿಳಿಸಿದರು. ಅನುಮೋದಿಸಿದ ಕ್ರಿಯಾ ಯೋಜನೆಗಳಲ್ಲಿ ಆರೋಗ್ಯ ವಲಯಕ್ಕೆ 200.01 ಕೋಟಿ ರೂ., ಕುಡಿವ ನೀರು 383 ಕೋಟಿ ರೂ., ಶಿಕ್ಷಣ 247.80 ಕೋಟಿ ರೂ., ಮೂಲ ಸೌಕರ್ಯಗಳಿಗೆ 448.14 ಕೋಟಿ ರೂ., ನೀರಾವರಿ ಮತ್ತು ನೈರ್ಮಲ್ಯ ವಲಯಕ್ಕೆ 147.07 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ, ಕೌಶಲಾಭಿವೃದ್ಧಿ ವಲಯ, ಪರಿಸರ ರಕ್ಷಣೆ ಮತ್ತು ಇತರ ವಲಯಗಳಿಗೆ ಒಟ್ಟು 167.53 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಮತ್ತು ಪೊಲೀಸ್ ಇಲಾಖೆ, ಎನ್‌ಸಿಸಿ ತಂಡದಿಂದ ಆಕರ್ಷಕ ಪಥಸಂಚನ ನಡೆಯಿತು. ಶಾಲೆ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ: ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಬಳ್ಳಾರಿ ನಗರದಲ್ಲಿ ಸುಸಜ್ಜಿತ 2 ಕೋಟಿ ರೂ. ವೆಚ್ಚದಲ್ಲಿ ಹಾಕಿ ಟರ್ಫ್ ನಿರ್ಮಾಣ, ಅದೇ ರೀತಿ 2 ಕೋಟಿ ರೂ. ಅನುದಾನದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಸ್ಟೇಡಿಯಂ ಹತ್ತಿರ ಉತ್ತಮವಾದ ಕೆರೆ ನಿರ್ಮಿಸಲಾಗಿದೆ. ಬಳ್ಳಾರಿ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅವರೊಂದಿಗೆ ಚರ್ಚಿಸಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ನಾಗೇಂದ್ರ ತಿಳಿಸಿದರು.