ಗೃಹಲಕ್ಷ್ಮೀ ಯೋಜನೆ ಸ್ತ್ರೀ ಸಬಲೀಕರಣಕ್ಕೆ ಪೂರಕ : ಸಚಿವ ಬಿ.ನಾಗೇಂದ್ರ ಹೇಳಿಕೆ

WhatsApp Image 2023-07-22 at 2.11.24 PM
Published on

ಬಳ್ಳಾರಿ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಹಾಗೂ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುವಂತಾಗಲು ಪ್ರತಿ ಕುಟುಂಬದ ಯಜಮಾನಿಗೆ ಆರ್ಥಿಕ ಬೆಂಬಲ ನೀಡುವಲ್ಲಿ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ ಎಂದು ಯುವಜನ ಸೇವೆ, ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದ ಎಸ್.ಪಿ ವೃತ್ತದ ಬಳಿ ಇರುವ ಸ್ತ್ರೀ ಸೇವಾ ನಿಕೇತನ ಆವರಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ, ಈಗಾಗಲೇ ಮೂರು ಯೋಜನೆಗಳು ಜಾರಿಗೊಂಡಿದ್ದು, ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದರಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯು ಕುಟುಂಬದ ಹೊರೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಇಡೀ ರಾಜ್ಯವೇ ಸರ್ಕಾರವನ್ನು ಕೊಂಡಾಡುತ್ತಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಯೋಜನೆಯ ಸೌಲಭ್ಯವನ್ನು ಎಲ್ಲ ಅರ್ಹ ಮಹಿಳೆಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಜಾನಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್, ಸಿಡಿಪಿಒ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net