

ಬಳ್ಳಾರಿ: ನಗರದ ವಿವಿಧ ಜನವಸತಿ ಪ್ರದೇಶಕ್ಕೆ ಶನಿವಾರ ಬೆಳಂಬೆಳ್ಳಗ್ಗೆ ಕರಡಿಯೊಂದು ನುಗ್ಗಿ ಜನರನ್ನು ಭಯ ಭೀತರನ್ನಾಗಿಸಿತು. ವಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ನ್ಯೂ ಡೆಂಟಲ್ ಕಾಲೇಜು ಹಾಗೂ ನಗರದ ರೇಣುಕಾ ಪ್ರದೇಶದ 16 ನೇ ಕ್ರಾಸ್ ಬಳಿ ಕರಡಿ ಕಾಲಿಟ್ಟು ಅವಾಂತರ ಸೃಷ್ಟಿಸಿತ್ತು. ಕರಡಿ ಬಂದಿದೆ ಎನ್ನುವಷ್ಟರಲ್ಲಿ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ ಹಿನ್ನಲೆ ರೇಣುಕಾ ನಗರದ ಬಳಿ ಪೊದೆಯಲ್ಲಿ ಅವಿತು ಕುಳಿತುಕೊಂಡಿತು. ಈ ವೇಳೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕರಡಿ ಹಿಡಿಯಲು ಹರ ಸಾಹಸ ಪಟ್ಟರೂ ಕರಡಿ ಮಾತ್ರ ಗಿಡದ ಪೊದೆಯಿಂದ ಹಲವು ಗಂಟೆಗಳ ಕಾಲ ಹೊರ ಬರಲಿಲ್ಲ.
ನಿರಂತರ 6 ಗಂಟೆಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಕರಡಿ ಹಿಡಿಯಲು ಯಶಸ್ವಿಯಾದರು. ಜನವಸತಿ ಪ್ರದೇಶದಲ್ಲಿ ಬಂದು ಇಡೀ ದಿನ ದೊಡ್ಡ ಅವಾಂತರ ಸೃಷ್ಟಿಸಿದ್ದ ಕರಡಿಗಳ ಪೈಕಿ ಆರಂಭದಲ್ಲಿ ಎರಡು ಕರಡಿಗಳಿವೆ ಎನ್ನಲಾಗಿತ್ತು. ಜೆಸಿಬಿ ಮೂಲಕ ಮುಳ್ಳು ಬೇಲಿ ತೆರವು ಮಾಡಿದ ಬಳಿಕ ಒಂದೇ ಒಂದು ಕರಡಿ ಇರೋದು ಬೆಳಕಿಗೆ ಬಂತು. ಇದಕ್ಕೂ ಮುನ್ನ ಹಳೆಯ ಡೆಂಟಲ್ ಕಾಲೇಜಿನ ಬಳಿಯ ನ್ಯೂ ಡೆಂಟಲ್ ಕಾಲೇಜಿನ ಕಾವಲುಗಾಗಿ ಹೋಂ ಗಾರ್ಡ್ ಒಬ್ಬರು ನಿನ್ನೆಯ ದಿನ ತಡರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರು. ತಡರಾತ್ರಿ 10 ಗಂಟೆಯ ಸುಮಾರಿಗೆ ಬಂದಂತಹ ಇದೇ ಕರಡಿ ಏಕಾಏಕಿ ಹೋಮ್ ಗಾರ್ಡ್ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಕೂಡ ಬೆಳಕಿಗೆ ಬಂದಿದೆ. ಹೋಮ್ ಗಾರ್ಡ್ ತಕ್ಷಣವೇ ವಿಶ್ರಾಂತಿ ಕೊಠಡಿಯೊಳಗೆ ಹೋಗಿದ್ದರಿಂದ ಕರಡಿ ದಾಳಿಯಿಂದ ಸ್ೇ ಆಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದಾದ ಬಳಿಕ ಬೆಳಗ್ಗೆ ರೇಣುಕಾ ನಗರದಲ್ಲಿ ಪ್ರತ್ಯಕ್ಷವಾಗಿದೆ.