ಬೆಳಗಾವಿ ಬಂದ್‌ಗೆ ಒಕ್ಕೊರಲ ಧ್ವನಿ!

02
Published on

ಬೆಳಗಾವಿ: ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗೊಂಡಿರುವ ಯೋಜನೆ ತಕ್ಷಣವೇ ಕೈ ಬಿಡಬೇಕು. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ‘ಬೆಳಗಾವಿ ಬಂದ್’ಗೆ ಕರೆ ನೀಡುವಂತೆ ಉದ್ಯಮಿಗಳು, ವಿವಿಧ ಸಂಘಟನೆಗಳ ಮುಖಂಡರು, ನಾಗರಿಕರು ಒಕ್ಕೊರಲ ಧ್ವನಿ ಎತ್ತಿದರು.

ಇದು ಬೆಳಗಾವಿ ನಗರದ ಮಾರುತಿ ಗಲ್ಲಿಯ ಮಾರುತಿ ಮಂದಿರದಲ್ಲಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ ನಮ್ಮ ನೀರು, ನಮ್ಮ ಹಕ್ಕು’ ಸಭೆಯಲ್ಲಿ ಹೋಟೆಲ್ ಉದ್ದಿಮೆದಾರರು, ಕನ್ನಡಪರ, ಮಹಾನಗರ ಪಾಲಿಕೆ, ದಂಡು ಮಂಡಳಿಯ ಮಾಜಿ ಸದಸ್ಯರು, ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ನಗರದಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಹೋಟೆಲ್ ಉದ್ಯಮ ಸೇರಿ ನಗರ ನಾಗರಿಕರು ಕುಡಿಯುವ ನೀರಿಗಾಗಿ ಹಿಡಕಲ್, ರಕ್ಕಸಕೊಪ್ಪ ಜಲಾಶಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಾದರೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಇಲ್ಲ.

ಬೆಳಗಾವಿ, ಬಾಗಲಕೋಟೆ ಕೃಷಿ ಜಮೀನುಗಳು ಹಿಡಕಲ್ ಜಲಾಶಯದ ಮೇಲೆ ಅವಲಂಬಿತವಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಗೌಪ್ಯವಾಗಿ ಧಾರವಾಡ ಕೈಗಾರಿಕೆ ಉದ್ದೇಶಕ್ಕೆ ಅರ್ಧ ಟಿಎಂಸಿ ನೀರು ಸರಬರಾಜು ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಯೋಜನೆ ಕೈ ಬಿಡದಿದ್ದರೆ ಸಚಿವರು, ಶಾಸಕರು, ಅಧಿಕಾರಿಗಳ ಮನೆಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಬೇಕು ಎಂದು ಹೋರಾಟಗಾರು ಒತ್ತಾಯಿಸಿದರು.

ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ರಮೇಶ ಕುಡಚಿ, ಪಾಲಿಕೆ, ದಂಡು ಮಂಡಳಿ ಸದಸ್ಯರು ಎಚ್ಚರಿಸಿದರು. ಮಲ್ಲೇಶ ಚೌಗುಲೆ, ವಿಜಯಕುಮಾರ ಪಾಟೀಲ, ಮಹಾವೀರ ಜೈನ್, ಸುಜೀತ ಮುಳಗುಂದ, ಅಶೋಕ ಚೌಗಲಾ, ಪ್ರೇಮಾ

ಚೌಗಲಾ, ಮಹಾಂತೇಶ ಗೌಡರ, ದೀಪಕ ಗುಡಗನಟ್ಟಿ, ರಮಾಕಾಂತ ಕೊಂಡಸ್ಕರ್ ಇತರರಿದ್ದರು.

ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಸಂಕಷ್ಟ: ಸರ್ಕಾರ ಪ್ರಮುಖ ಖಾತೆಯಲ್ಲಿರುವ ಸಚಿವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್ ಅವರು ಯೋಜನೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಇವರೆಲ್ಲರನ್ನು ಹೇಗೆ ನಂಬೋದು? ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದರು.

ಫೆ.3ರಂದು ಬೃಹತ್ ಪ್ರತಿಭಟನೆ: ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ಖಂಡಿಸಿ ಫೆಬ್ರವರಿ 3ರಂದು ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದು. ಬಳಿಕ ಎಲ್ಲ ವಾರ್ಡ್‌ಗಳಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ನೀರು ನಮ್ಮ ಹಕ್ಕು ಜನಾಂಧೋಲನ ರೂಪಿಸಿ ಬೆಳಗಾವಿ ಬಂದ್‌ಗೆ ಕರೆ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net