ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

ಬೆಳಗಾವಿಯಲ್ಲಿ ಶುಕ್ರವಾರ ಜಿಪಂ ಸಿಇಒ ರಾಹುಲ ಶಿಂಧೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಬೆಳಗಾವಿಯಲ್ಲಿ ಶುಕ್ರವಾರ ಜಿಪಂ ಸಿಇಒ ರಾಹುಲ ಶಿಂಧೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
Published on
ಬೆಳಗಾವಿ: ವಸತಿ ನಿಲಯಗಳಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ನಿಲಯ ಪಾಲಕರು (ವಾರ್ಡನ್) ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕುಮಟ್ಟದ ಅಧಿಕಾರಿ ಮತ್ತು ಸರ್ಕಾರಿ ವಸತಿ ನಿಲಯಗಳ ನಿಲಯ ಪಾಲಕರ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ನಿಲಯಗಳ ಸಮರ್ಪಕ ನಿರ್ವಹಣೆಯಲ್ಲಿ ವಾರ್ಡನ್‌ಗಳ ಪಾತ್ರ ಪ್ರಮುಖವಾಗಿದೆ. ಬದ್ಧತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ತಮ್ಮ ಸ್ವಂತ ಮಕ್ಕಳಂತೆ ಕಾಳಜಿಯಿಂದ ಕಾಣಬೇಕು. ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಸತಿ ನಿಲಯಗಳಲ್ಲಿನ ಪ್ರತಿಯೊಂದು ವಿಷಯಗಳ ಮೇಲೆ ನಿಗಾವಹಿಸಬೇಕು ಎಂದು ನಿರ್ದೇಶಿಸಿದರು.
ಭದ್ರತೆಗೆ ಕ್ರಮವಹಿಸಬೇಕು. ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ನಿರ್ವಹಣೆಯನ್ನು ನೋಡಿಕೊಳ್ಳಬೇಕು. ವಿದ್ಯುತ್ ವ್ಯವಸ್ಥೆ ಸಹಿತ ಅಪಾಯದ ಅಂಶಗಳನ್ನು ಗಮನಿಸಿ ಕೂಡಲೇ ಸರಿಪಡಿಸಿಕೊಳ್ಳಬೇಕು. ಮಕ್ಕಳಿಗೆ ಅಪಾಯಗಳ ಬಗ್ಗೆ ಎಚ್ಚರವಹಿಸುವಂತೆ ಜಾಗೃತಿ ಮೂಡಿಸಬೇಕು. ಪ್ರತಿ ಮಕ್ಕಳ ಬಗ್ಗೆಯೂ ವೈಯಕ್ತಿಕವಾಗಿ ಗಮನವಹಿಸಬೇಕು. ಎಲ್ಲ ಆಹಾರ ಪದಾರ್ಥಗಳ ಗುಣಮಟ್ಟ ನಿಯಮಿತ ಪರಿಶೀಲಿಸಬೇಕು. ಸ್ವಚ್ಚತೆಗೆ ಆದ್ಯತೆ ನೀಡಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳ ನಿರ್ವಹಣೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಎಂ.ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನಕುಮಾರ, ತಾಪಂ ಇಒಗಳು, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕಾಮಟ್ಟದ ಅಧಿಕಾರಿಗಳು, ವಸತಿನಿಲಯಗಳ ಪಾಲಕರು, ಪ್ರಾಂಶುಪಾಲರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net