ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ಕಡ್ಡಾಯ

ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಹುಲ ಶಿಂಧೆ ಮಾತನಾಡಿದರು, ಡಾ.ಶ್ರೀಕಾಂತ ಸುಣಧೋಳಿ, ಡಾ.ಚಂದ್ರಶೇಖರ ಸಿದ್ದಾಪುರ ಇತರರಿದ್ದರು.
ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಹುಲ ಶಿಂಧೆ ಮಾತನಾಡಿದರು, ಡಾ.ಶ್ರೀಕಾಂತ ಸುಣಧೋಳಿ, ಡಾ.ಚಂದ್ರಶೇಖರ ಸಿದ್ದಾಪುರ ಇತರರಿದ್ದರು.
Published on
ಬೆಳಗಾವಿ:ಶಾಲಾ ಮಕ್ಕಳಿಗೆ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಸರಳ ಯೋಗಾಸನಗಳು ಮತ್ತು ಆಯುಷ್ ಗಿಡ ಮೂಲಿಕೆಗಳ ಬಗ್ಗೆ ಪ್ರಾತ್ಯಕ್ಷೀತೆ ನೀಡುವ ಮೂಲಕ ಬಲವರ್ಧನೆಗೊಳಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ತಿಳಿಸಿದರು.
ನಗರ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯುಷ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಯೋಗ ಮತ್ತು ಆಯುಷ ಪದ್ದತಿಗಳ ಬಲವರ್ಧೆನೆಗೊಳಿಸುವ ಪ್ರಯುಕ್ತ ಜಿಲ್ಲಾ ಆಯುಷ್ ಅಧಿಕಾರಿಗಳು ಮತ್ತು ತಂಡದವರು ಎಲ್ಲ ತಾಲೂಕುಗಳ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ಕಡ್ಡಾಯ ನೀಡಬೇಕು ಎಂದರು.
ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಬರುವ ಆಯುಷ ಇಲಾಖೆಯ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಉತ್ತಮ ರೀತಿಯ ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಪ್ರಸ್ತುತ ಲಭ್ಯವಿರುವ ಐ.ಇ.ಸಿ ಅನುದಾನವನ್ನು ಬಳಸಿಕೊಳ್ಳಲು ಯೋಜನೆ ರೂಪಿಸಬೇಕು. ಕೇವಲ ಕಚೇರಿಗೆ ಸೀಮಿತಗೊಳ್ಳದೆ ಜನರಿಗೆ ಆಯುಷ ಇಲಾಖೆಯ ಮಹತ್ವ ತಿಳಿಸುವ ಕೆಲಸ ಮಾಡಬೇಕು.
ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ಆಸ್ಪತ್ರೆಗಳ ಮೂಲಕ ಪಂಚಕರ್ಮ ಮತ್ತು ಅಗ್ನಿಕರ್ಮಗಳಂತಹ ಚಿಕಿತ್ಸೆಗಳನ್ನು ಜನಸಾಮಾನ್ಯರಿಗೂ ಸಿಗಬೇಕು. ಈ ಚಿಕಿತ್ಸಾ ಪದ್ಧತಿ ಗ್ರಾಮೀಣ ಭಾಗದ ಜನರಿಗೆ, ಬಡವರಿಗೆ ಸೌಲಭ್ಯ ದೊರಕುವಂತೆ ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ ಸುಣಧೋಳಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈಧ್ಯಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಕನಿಷ್ಟ 3 ವಸತಿ ಶಾಲೆಗಳ ವಸತಿ ನೀಲಯಗಳನ್ನು ದತ್ತು ಪಡೆದು ಅಲ್ಲಿರುವ ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಮತ್ತು ಯೋಗಗಳ ಬಗ್ಗೆ ಮಾಹಿತಿ ನೀಡಿ ದತ್ತಾಂಶ ಸಂಗ್ರಹಣೆ ಮಾಡಲಾಗುವುದು.ಆಯುಷ ಪದ್ದತಿಗಳನ್ನು ಮುಖ್ಯ ವಾಹಿನಿಗೆ ತರಲು ಜನರು ಮತ್ತು ಜನಪ್ರತಿನಿಧಿಗಳ ಜತೆಗೆ ಉತ್ತಮ ಸಂಬಂಧ ವಿರಿಸಿಕೊಂಡು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಈ ಔಷಧಿ ಪದ್ದತಿಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯ ಆಯುಷ್ ಇಲಾಖೆ ಸಮನ್ವಯ ಅಧಿಕಾರಿ ಡಾ. ಚಂದ್ರಶೇಖರ ಸಿದ್ದಾಪೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net