ಬಾಲ ಕಾರ್ಮಿಕ ಮತ್ತು ಜೀತ ಪದ್ಧತಿ ನಿರ್ಮೂಲನೆಗೆ ಜಾಗೃತಿ ಮೂಡಿಸಿ

ಬೆಳಗಾವಿಯಲ್ಲಿ ಸೋಮವಾರ ಜರುಗಿದ ಕಾರ್ಯಾಗಾರವನ್ನು ನ್ಯಾಯಧೀಶೆ ಸಂಧ್ಯಾ ಎನ್. ಉದ್ಘಾಟಿಸಿದರು.
ಬೆಳಗಾವಿಯಲ್ಲಿ ಸೋಮವಾರ ಜರುಗಿದ ಕಾರ್ಯಾಗಾರವನ್ನು ನ್ಯಾಯಧೀಶೆ ಸಂಧ್ಯಾ ಎನ್. ಉದ್ಘಾಟಿಸಿದರು.
Published on
ಬೆಳಗಾವಿ: ಮಕ್ಕಳ ಕೈಯಲ್ಲಿ ಬಳಪ, ಪುಸ್ತಕ ಇದ್ದರೆ ಚೆಂದ. ಆದರೆ ಇಂದಿನ ಎಷ್ಟೋ ಮಕ್ಕಳ ಕೈಯಲ್ಲಿ ಇಟ್ಟಿಗೆಯಂತಹ ವಸ್ತುಗಳನ್ನು ನೀಡುವುದರ ಮೂಲಕ ಅವರನ್ನು ಬಾಲ ಕಾರ್ಮಿಕರನ್ನಾಗಿಸಲಾಗುತ್ತಿರುವುದು ಕಳವಳಕಾರಿ ಸಂಗತಿ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶೆ ಸಂಧ್ಯಾ ಎನ್. ಹೇಳಿದರು.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಜರುಗಿದ ಜೀತ ಕಾರ್ಮಿಕ ಕಾಯ್ದೆ 1976 ಮತ್ತು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ ಕುರಿತ ನಿಷೇಧಾಧಿಕಾರಿಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೂ ಅವರದ್ದೆಯಾದ ಮೂಲಭೂತ ಹಕ್ಕುಗಳಿವೆ.. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳ ಕುರಿತು ಜನಜಾಗೃತಿ ಮೂಡಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಬಾಲಕಾರ್ಮಿಕ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಲು ಜಾರಿಯಲ್ಲಿರುವ ಕಾನೂನುಗಳ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಹಾಗೂ ಜೀತ ವಿಮುಕ್ತ ಪುನರ್ವಸತಿ ಯೋಜನೆ ನೋಡಲ್ ಅಧಿಕಾರಿ ವಿಜಯಕುಮಾರ ಹೊನಕೇರಿ ಮಾತನಾಡಿ, ಶಾಲೆಗಳಲ್ಲಿ ನಿರಂತರ ಗೈರಾಗಿರುವ ವಿಧ್ಯಾರ್ಥಿಗಳ ಮೇಲೆ ನಿಗಾವಹಿಸಬೇಕು. ವಿವಿಧ ಇಲಾಖೆಗಳಿಂದ ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು. ಬಾಲ್ಯ ವಿವಾಹ, ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಬೇಕು ಎಂದರು.
ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್, ವಕೀಲ ಸ್ಟ್ಯಾನಿ ಕ್ರಿಸ್ಟೋಫರ್, ಪೊಲೀಸ್ ಆಯುಕ್ತ ಭೂಷಣ ಬೋರಸೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಬೆಳಗಾವಿ ವಿಭಾಗದ ಐಜೆಎಂ ವೇಣುಗೋಪಾಲ, ಜ್ಯೋತಿ ಕಾಂತೆ, ಎಮ್.ಎಸ್.ಜೋಗುರ, ರಾಜೇಶ ಜಾಧವ, ಸಂಜೀವ ಭೊಸಲೆ, ರಮೇಶ ಕೆಸರೂರ, ರಾಜೇಶ ಅಸ್ನೊಟಿಕರ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net