ಮಹಿಳಾ ನೌಕರರ ಸಂಘ ಮುಂದಿನ ತಿಂಗಳು ಉದ್ಘಾಟನೆ

 ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಹಿಳಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ವೀಣಾ ಹೊಸಮನಿ ಮಾತನಾಡಿದರು.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಹಿಳಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ವೀಣಾ ಹೊಸಮನಿ ಮಾತನಾಡಿದರು.
Published on
ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧೀನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ ಜಿಲ್ಲಾ ಘಟಕ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದ್ದು, ಅದಕ್ಕೆ ಪೂರಕವಾಗಿ ಪದಾಧಿಕಾರಿಗಳ ಆಯ್ಕೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಅಧ್ಯಕ್ಷೆ ಗೀತಾ ಎಸ್. ದಳವಾಯಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆ ಬಳಿಕ ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಮಾತೃ ಸಂಘದ ನಿರ್ದೇಶನದಲ್ಲಿಯೇ ನಮ್ಮ ಸಂಘ ಮುಂದುವರೆಯಲಿದ್ದು, ಇದು ಪ್ರತ್ಯೇಕವಲ್ಲ. ಮುಖ್ಯ ಸಂಘದಲ್ಲಿಯೇ ಒಂದು ಘಟಕವನ್ನಾಗಿ ಮಾಡಿಕೊಂಡು, ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ವಿವರಿಸಿದರು.
ಮಹಿಳಾ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಕಾರ್ಯಾಗಾರಗಳು, ಆರೋಗ್ಯ ತಪಾಸಣೆ, ಯೋಗ ಶಿಬಿರ, ರಕ್ತದಾನ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಲಾಗುವುದು. ಆಯಾ ನೌಕರರಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಾಗಿರುವ ಸಾಹಿತ್ಯ, ಕಲೆ,ಕವನ, ಸಂಗೀತ, ಕ್ರೀಡೆ ನೃತ್ಯ, ನಾಟಕದಂತಹ ವಿವಿಧ ಕೌಶಲಗಳನ್ನು ಸಂಘದಿಂದಲೇ ಪ್ರೋತಾಹಿಸಿ ವೇದಿಕೆ ಒದಗಿಸಿಕೊಡಲಾಗುವುದು. ನೌಕರರಿಗೆ ಸಮಸ್ಯೆಗಳು ಬಂದಾಗ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷೆ ವೀಣಾ ಹೊಸಮನಿ ಮಾತನಾಡಿ, ಮೂಲ ಸಂಘದಲ್ಲಿ ಮಹಿಳಾ ಉದ್ಯೋಗಿಗಳಿಗೆ ಪ್ರಾತಿನಿಧ್ಯವಿದೆ. ಆದರೆ, ಮಹಿಳೆಯರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು, ಸೂಕ್ಷ್ಮ ವಿಚಾರಗಳನ್ನು ಪುರುಷ ಸಹವರ್ತಿಗಳೊಂದಿಗೆ ಚರ್ಚಿಸಲಾಗದು. ಅದಕ್ಕಾಗಿ ಮಹಿಳಾ ಉದ್ಯೋಗಿಗಳು ತಮ್ಮ ಸಮಸ್ಯೆಯನ್ನು ತಮ್ಮದೇ ಆಪ್ತರ ಮುಂದೆ ಹಂಚಿಕೊಳ್ಳಲು ಮುಕ್ತ ವೇದಿಕೆ ಕಲ್ಪಿಸಲು ಈ ಸಂಘ ಆರಂಭಿಸಲಾಗಿದೆ. ಮಾತೃ ಸಂಘದ ಅಧ್ಯಕ್ಷ ಷಡಕ್ಷರಿಯವರ ನಿರ್ದೇಶನದ ಮೇರೆಗೆ ನಾವು ಮುನ್ನಡೆಸುತ್ತಿದ್ದೇವೆ ಎಂದು ಹೇಳಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೃಪಾಲಿನಿ ಗಡದವರ, ಬಸವರಾಜ ರಾಯವ್ವಗೋಳ,ಮಲ್ಲಮ್ಮ ರೆಡ್ಡಿ, ರುದ್ರಮ್ಮ ಚಲವಾದಿ, ಗಿರಿಜಾ ಪಡಸಲಗಿ, ಪವಿತ್ರ ಬೈಲೂರ, ಪಲ್ಲವಿ ಅಸೋದೆ, ರಾಜೇಶ್ವರಿ ಲದ್ದಿಮಠ, ಕಸ್ತೂರಿ ಕುಲ್ಲೋಳಿ, ಅಶ್ವಿನಿ ಶೀಗೇಹಳ್ಳಿ, ಅಶ್ವಿನಿ ಅವಟೆ ಸುದ್ದಿಗೋಷ್ಠಿಯಲ್ಲಿದ್ದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net