ಡಿಕೆಶಿ ಹೇಳಿದ್ದು ಭೂತದ ಬಾಯಲ್ಲಿ ಭಗವದ್ಗೀತೆ

ಬೆಳಗಾವಿಯಲ್ಲಿ ಬಿಜೆಪಿ ಆಯೋಜಿಸಿದ್ದ ಧರಣಿಯಲ್ಲಿ ಸಂಸದ ಜಗದೀಶ ಶೆಟ್ಟರ ಮಾತನಾಡಿದರು. ಡಾ.ಸೋನಾಲಿ ಸರ್ನೋಬತ್, ಸಂಜಯ ಪಾಟೀಲ, ಗೀತಾ ಸುತಾರ, ಸುಭಾಸ ಪಾಟೀಲ ಇತರರಿದ್ದರು.
ಬೆಳಗಾವಿಯಲ್ಲಿ ಬಿಜೆಪಿ ಆಯೋಜಿಸಿದ್ದ ಧರಣಿಯಲ್ಲಿ ಸಂಸದ ಜಗದೀಶ ಶೆಟ್ಟರ ಮಾತನಾಡಿದರು. ಡಾ.ಸೋನಾಲಿ ಸರ್ನೋಬತ್, ಸಂಜಯ ಪಾಟೀಲ, ಗೀತಾ ಸುತಾರ, ಸುಭಾಸ ಪಾಟೀಲ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಡಿ.ಕೆ.ಶಿವಕುಮಾರ ಮತ್ತೊಂದು ಹೆಸರೇ ಭ್ರಷ್ಟಾಚಾರ. ಓರ್ವ ಭ್ರಷ್ಟಾಚಾರಿ ತನ್ನ ಜತೆಗೆ ಸಹಜವಾಗಿ ಭ್ರಷ್ಟಾಚಾರಿಯನ್ನೇ ಇಟ್ಟುಕೊಳ್ಳಲು ಬಯಸುತ್ತಾನೆ. ಹೀಗಾಗಿ, ಬಿ.ನಾಗೇಂದ್ರ ನಿರ್ದೋಷಿ ಎಂದು ಸಾಬೀತಾಗುವ ಮುನ್ನವೇ ಡಿಕೆಶಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಬೆಳಗಾವಿ ನಗರ, ಗ್ರಾಮೀಣ ಘಟಕಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿಯಾದ ತಕ್ಷಣ, ಭ್ರಷ್ಟಾಚಾರರಹಿತ ಸರ್ಕಾರ ಕೊಡುವ ಭರವಸೆ ನೀಡಿದ್ದರು. ಯಾವುದೇ ಅಧಿಕಾರಿ ಲಂಚ ಕೇಳಿದರೆ ನೇರವಾಗಿ ನನಗೆ ಹೇಳಿ, ಕ್ರಮ ತೆಗೆದುಕೊಳ್ಳುವೆ ಎಂದು ಭಾಷಣ ಬಿಗಿದಿದ್ದರು. ಈಗ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದನ್ನು ನೋಡಿದರೆ, ಅಂದು ಡಿಕೆಶಿ ಹೇಳಿದ್ದೆಲ್ಲವೂ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರವನ್ನು ದೆಹಲಿಯ ಹೈಕಮಾಂಡ್ ನಿರ್ವಹಿಸುತ್ತಿದೆ. ಸಚಿವ ಸ್ಥಾನ, ಖಾತೆ ಹಂಚಿಕೆ ಎಲ್ಲವೂ ದೆಹಲಿಯ ಹೈಕಮಾಂಡ್ ಮೂಲಕವೇ ಆಗಿದೆ. ಇದಕ್ಕಾಗಿ ತಿಂಗಳುಗಟ್ಟಲೇ ಕಾದಿದ್ದಾರೆ. ಅತೀ ಹೆಚ್ಚು ಸಂಪನ್ಮೂಲ ಇರುವ ರಾಜ್ಯ ಕರ್ನಾಟಕ. ಹೀಗಾಗಿ, ಕೈ ವರಿಷ್ಠರಿಗೆ ಎಟಿಎಂ ಸಿಕ್ಕಂತಾಗಿದೆ. ಸಚಿವರಾದವರೆಲ್ಲರೂ ದೆಹಲಿಯಲ್ಲಿ ಕಾಣಿಕೆ ಕೊಟ್ಟು ಬಂದಿದ್ದಾರೆ. ಇದನ್ನು ಕಾಂಗ್ರೆಸ್ಸಿನ ಕೆಲ ಶಾಸಕರೇ ನನ್ನ ಮುಂದೆ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ತಮ್ಮ ಬಳಿ ಒಂದು ಬಾಂಬ್ ಮತ್ತು ಒಂದು ಕಲ್ಲು ಇಟ್ಟುಕೊಂಡು ಕಾಯುತ್ತಿದ್ದಾರೆ. ಯಾವಾಗ ಎಸೆಯುತ್ತಾರೋ ಗೊತ್ತಿಲ್ಲ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ, ಮಹಾನಗರ ಜಿಲ್ಲಾ ಅಧ್ಯಕ್ಷೆ ಗೀತಾ ಸುತಾರ, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಕೆ.ವಿ.ಪಾಟೀಲ, ಸಿ.ಬಿ.ಪಾಟೀಲ, ಶ್ರೀಶೈಲ ಯಮಕನಮರಡಿ, ಬಸವರಾಜ ಹುಂದ್ರಿ, ಚೇತನ ಅಂಗಡಿ, ಯುವರಾಜ ಜಾಧವ, ನಿತಿನ ಚೌಗಲೆ, ಈರಣ್ಣ ಅಂಗಡಿ, ವಿಜಯ ಗುಡದೇರಿ, ಪ್ರಶಾಂತ ಅಮ್ಮಿನಬಾವಿ ಇತರರಿದ್ದರು.
***
ಕೋಟ್...
ಕಾಂಗ್ರೆಸ್ ಎಂದರೆ ಪ್ರಗತಿ ಶೂನ್ಯ ಸರ್ಕಾರ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಾಧಿಸಿದ್ದ ಪ್ರಗತಿಯನ್ನು ಇವರು ಮೂರೇ ವರ್ಷದಲ್ಲಿ ಹಾಳುಗೆಡವಿದ್ದಾರೆ. ಜನರ ಕಲ್ಯಾಣ ಇವರಿಗೆ ಬೇಕಿಲ್ಲ್ಲ. ಸಚಿವ ಸ್ಥಾನ ಹಾಗೂ ಸ್ವಹಿತಾಸಕ್ತಿ ಜಗಳದಲ್ಲೇ ಇವರೆಲ್ಲರೂ ಮುಳುಗಿದ್ದು, ಈ ಭ್ರಷ್ಟ ಸರ್ಕಾರವನ್ನು ಜನರು ಕಿತ್ತೆಸೆಯಬೇಕಿದೆ.
ಡಾ.ಸೋನಾಲಿ ಸರ್ನೋಬತ್
ಬಿಜೆಪಿ ಮಹಿಳಾ ರಾಜ್ಯ ಮೋರ್ಚಾ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net