ಡ್ರಗ್ಸ್ ಮಾಫಿಯಾ ಮಟ್ಟ ಹಾಕುತ್ತೇವೆ

ಬೆಳಗಾವಿಯಲ್ಲಿ ಶುಕ್ರವಾರ ನೂತನ ಪೊಲೀಸ್ ವಸತಿ ಗೃಹಗಳನ್ನು ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು.
ಬೆಳಗಾವಿಯಲ್ಲಿ ಶುಕ್ರವಾರ ನೂತನ ಪೊಲೀಸ್ ವಸತಿ ಗೃಹಗಳನ್ನು ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು.
Published on
ಬೆಳಗಾವಿ : ರಾಜ್ಯದೊಳಗೆ ದೊಡ್ಡ ಪ್ರಮಾಣದಲ್ಲಿ ಮಾದಕ ಪದಾರ್ಥಗಳನ್ನು ಹೊರಗಿನಿಂದ ತಂದು ಹಂಚುವ ಪ್ರಯತ್ನ ನಡೆದಿದೆ. ಈವರೆಗೆ ಸಾವಿರಾರೂ ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ ಮಾಡಿದ್ದರೂ, ಈ ಜಾಲ ನಿಂತಿಲ್ಲ. ಕಳೆದ ರಾತ್ರಿ ಬೆಂಗಳೂರಿನಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಸರ್ಕಾರ ಇದರ ವಿರುದ್ಧ ನೇರ ಸಮರ ಸಾರಿದ್ದು, ಇದರ ಹಿಂದೆ ಎಂತಹ ಪ್ರಭಾವಿಗಳೇ ಇರಲಿ ಸುಮ್ಮನೆ ಬಿಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಗುಡುಗಿದ್ದಾರೆ.
ನಗರದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ನಗರ ಪೊಲೀಸ್ ಕಮಿಷ್ನರೇಟ್ ಮತ್ತು ಜಿಲ್ಲಾ ಪೊಲೀಸ್ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕದೇ ಬಿಡುವುದಿಲ್ಲ. ವಿದ್ಯಾರ್ಥಿ ಸಮೂಹ ಇದಕ್ಕೆ ಮಾರು ಹೋಗುವುದನ್ನು ತಡೆಯಲು ಪೊಲೀಸರ ಮೂಲಕ ಈವರೆಗೆ 15 ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ ಭೇಟಿಯಾಗಿ ಜಾಗೃತಿ ಮೂಡಿಸಲಾಗಿದೆ. ಜಾಗೃತಿ ಜತೆಗೆ ದಂಧೆಕೋರರನ್ನು ಪತ್ತೆ ಮಾಡುವಂತೆ ಎಲ್ಲ ಠಾಣೆಗಳಿಗೂ ಸೂಚನೆ ಕೊಡಲಾಗಿದೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ಈ ಮೂರು ವರ್ಷದಲ್ಲಿ ಯಾವುದೇ ಕೋಮು ಗಲಭೆಯಾಗಲು ಬಿಟ್ಟಿಲ್ಲ. ಮುಂದೆಯೂ ಇದಕ್ಕೆ ಆಸ್ಪದ ಕೊಡುವುದಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆ ಮಾಡುವವರು ಯಾವುದೇ ಸಮುದಾಯದವರಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಸೈಬರ್ ಅಪರಾಧ ತಡೆಗೆ ಕೇಂದ್ರ ಸರ್ಕಾರದ ಜತೆಗೆ ಸೇರಿ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾನ್ಸಟೇಬಲ್‌ವರೆಗೆ ಎಲ್ಲರಿಗೂ ಸೈಬರ್ ಅಪರಾಧ ಕುರಿತ ವಿಶೇಷ ತರಬೇತಿ ನೀಡಲಾಗುತ್ತಿದೆ. ಈವರೆಗೆ 15 ಸಾವಿರ ಸಿಬ್ಬಂದಿ ತರಬೇತಿ ಪಡೆದಿದ್ದು, ಇದಕ್ಕಾಗಿ ಜಿಲ್ಲೆಗೊಂದು ಸೈಬರ್ ಲ್ಯಾಬ್ ಮಾಡಲಾಗುತ್ತಿದೆ. ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನಲ್ಲೇ ಕುಳಿತು ರಾಜ್ಯದ ಎಲ್ಲ ಜೈಲುಗಳ ಮೇಲೆ ನಿಗಾ ಇಡುವುದಕ್ಕಾಗಿ ವಿಶೇಷವಾದ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನಮಣ್ಣನವರ, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಠೋರ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಜಿಪಂ ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್ಪಿ ಕೆ.ರಾಮರಾಜನ ಇತರರಿದ್ದರು.

ಕವಿತಾಳ ಮಾದರಿಯಲ್ಲೇ ಠಾಣೆಗಳ ಪರಿವರ್ತನೆ

ರಾಯಚೂರ ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ಕೇಂದ್ರ ಗೃಹ ಇಲಾಖೆಯಿಂದ ದೇಶದ ಮೂರನೇ ಅತ್ಯುನ್ನತ ಜನಸ್ನೇಹಿ ಠಾಣೆ ಎಂಬ ಹೆಗ್ಗಳಿಕೆ ಪಡೆದಿದೆ. ಕವಿತಾಳ ಮಾದರಿಯಲ್ಲಿ ರಾಜ್ಯದ ಸಾವಿರ ಠಾಣೆಗಳನ್ನು ಜನಸ್ನೇಹಿಯಾಗಿ ಪರಿವರ್ತಿಸುವಂತೆ ಸೂಚನೆ ಕೊಟ್ಟಿದ್ದೇವೆ. ಠಾಣೆಗೆ ಬಂದವರನ್ನು ಚೆನ್ನಾಗಿ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಬೇಕು. ಜನರಿಗೋಸ್ಕರ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಠಾಣೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳದೇ ಹೋದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net