ಚಿಕ್ಕೋಡಿ:ತಾಲೂಕಿನ ಕೋಥಳಿವಾಡಿ ಗ್ರಾಮದಲ್ಲಿನ ಲಕ್ಷ್ಮೀ ದೇವಸ್ಥಾನದ ಬಳಿ ಸ್ಥಳೀಯ ಶಾಸಕರ ಅನುದಾನದಲ್ಲಿ ಬುಧವಾರ ಬೋರವೆಲ್ ಕೊರೆಸುವ ಮೂಲಕ ಇಲ್ಲಿನ 75ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದ್ದಾರೆ.
ತಾಲೂಕು ಕೇಂದ್ರದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ, ಜನರು ಹನಿ ನೀರಿಗಾಗಿ ಬಾವಿ, ಬೋರವೆಲ್ ಹುಡುಕಾಡಿ ನೀರು ತರಬೇಕಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಜಲದಾಹ ತಣಿಸಿಕೊಳ್ಳಲು ಕೊಡ ಹಿಡಿದು ಅಲೆಯುವುದು ಕಾಯಕವಾಗಿತ್ತು.
ಗಮನ ಸೆಳೆದಿದ್ದ ವಿಜಯವಾಣಿ: ಕೋಥಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕೋಥಳಿವಾಡಿ ಗ್ರಾಮದಲ್ಲಿನ ಮೂಲಸೌಕರ್ಯ ಕೊರತೆ ಕುರಿತು ವಿಜಯವಾಣಿ ದಿನಪತ್ರಿಕೆಯಲ್ಲಿ ಜೂ.8ರಂದು ‘ಮೂಲಸೌಕರ್ಯ ವಂಚಿತ ಕೋಥಳಿವಾಡಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯ ಶಾಸಕರು ಗ್ರಾಮದ ದೇವಸ್ಥಾನ ಬಳಿ ಬೋರವೆಲ್ ಕೊರೆಯಿಸುವ ಮೂಲಕ ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ಕೊಳವೆ ಬಾವಿಯಲ್ಲಿ 2.5 ಇಂಚು ನೀರು ಬಂದಿದ್ದು ಜನರಲ್ಲಿ ಸಂತಸ ಮೂಡಿಸಿದೆ.
ಗ್ರಾಮದಲ್ಲಿನ ಜನರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜನಪರ ಕಾಳಜಿ ಹೊಂದಿರುವ ವಿಜಯವಾಣಿ ಪತ್ರಿಕೆ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.