ಜುಗೂಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಬಸವಲಿಂಗ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಶ್ರೀ, ಯತೀಶ್ವರಾನಂದ ಶ್ರೀ, ಡಾ.ಶ್ರದ್ಧಾನಂದ ಶ್ರೀ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಮೆಚ್ಚುಗೆ
ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಮಹೋತ್ಸವ
ಕಾಗವಾಡ: ಜುಗೂಳ ಗ್ರಾಮಸ್ಥರ ಭಕ್ತಿಗೆ ಮನಸೋತ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಜುಗೂಳ ಗ್ರಾಮವನ್ನು ತಮ್ಮ ತವರೂರು ಎಂದು ಬಣ್ಣಿಸಿದ್ದರು. ಅದರಂತೆ ಸಿದ್ಧೇಶ್ವರ ಶ್ರೀಗಳು ಸಹ ಈ ಗ್ರಾಮದ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಜುಗೂಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ತೃತೀಯ ಗುರುನಮನ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಕಳೆದ 75 ವರ್ಷಗಳಿಂದ ಸಿದ್ಧೇಶ್ವರ ಶ್ರೀ ಮತ್ತು ಮಲ್ಲಿಕಾರ್ಜುನ ಶ್ರೀಗಳು ತಮ್ಮ ಪ್ರವಚನದ ಮೂಲಕ ಇಲ್ಲಿ ಜ್ಞಾನದ ಹೊಳೆಹರಿಸಿದ್ದಾರೆ. ಜುಗೂಳ ಗ್ರಾಮಸ್ಥರು ನಿಜಕ್ಕೂ ಪುಣ್ಯವಂತರು. ಶ್ರೀಗಳ ಆದರ್ಶ ಪಾಲನೆ ಮಾಡಿದಲ್ಲಿ ಅವರಿಗೆ ಗುರುನಮನ ಸಲ್ಲಿಸದಂತಾಗುತ್ತದೆ ಎಂದರು.
ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜುಗೂಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಗುರುನಮನ ಮಹೋತ್ಸವ ಆಚರಿಸಲಾಗುತ್ತಿದೆ. ಬರುವ ವರ್ಷ ಮಲ್ಲಿಕಾರ್ಜುನ ಸ್ವಾಮೀಜಿ ಪದಾರ್ಪಣೆ ಮಾಡಿ 75 ವರ್ಷ ಪೂರ್ಣಗೊಳ್ಳಲಿರುವ ಸ್ಮರಣಾರ್ಥವಾಗಿ ಅದ್ದೂರಿ ಕಾರ್ಯಕ್ರಮ ಆಚರಿಸೋಣ ಎಂದರು.
ತಲಾ 51 ಸಾವಿರ ರೂ. ದೇಣಿಗೆ ನೀಡಿದ ಅಶೋಕ ಸುಂಕೆ, ಅಶೋಕ ಕಾಗವಾಡೆ, ಚಿದಾನಂದ ಮಿಣಚೆ ಮತ್ತು ಕಲ್ಲಪ್ಪ ಘಾಟಿಗೆ ದಂಪತಿಯನ್ನು ಸನ್ಮಾನಿಸಲಾಯಿತು.
ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಮಠದ ಡಾ.ಅಭಿನವ ಬ್ರಹ್ಮಾನಂದ ಶ್ರೀ,, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀ, ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಶ್ರೀ, ಟಾಕಳಿ ಗುರುದೇವಾಶ್ರಮದ ಶಿವದೇವ ಶ್ರೀ, ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀ ಸಾನ್ನಿಧ್ಯ ವಹಿಸಿದ್ದರು.