ಸಾಯಿ ಸ್ಪೋರ್ಟ್ಸ್ ಕ್ಲಬ್ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಮಹಿಳೆಯರು ಖೋದಾನಪುರದ ಬಾರ್ ಎದುರು ಪ್ರತಿಭಟನೆ ನಡೆಸಿದರು. ಶಂಕರ ಚಚಡಿ, ಮಹಾಂತೇಶ ಗೌಡರ, ಶಿವಕ್ಕ ಮಿನಕಿ, ಮಹಾದೇವಿ ಮರೆದ ಇತರರಿದ್ದರು.
ಸಾಯಿ ಸ್ಪೋರ್ಟ್ಸ್ ಕ್ಲಬ್ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಮಹಿಳೆಯರು ಖೋದಾನಪುರ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಾರ್‌ನಿಂದ ಮದ್ಯದ ಬಾಟಲ್ ಕೃಷಿ ಜಮೀನು, ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಗ್ರಾಮದಲ್ಲಿ ನಿತ್ಯ ವ್ಯಸನಿಗಳ ಜಗಳದಿಂದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗುವುದಲ್ಲದೆ ಕೃಷಿ ಜಮೀನುಗಳಿಗೆ ಹಾನಿಯಾಗುತ್ತಿವೆ. ಇದರಿಂದಾಗಿ ರೈತರು, ಸಾರ್ವಜನಿಕರು ಹಾಗೂ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ನಿರೀಕ್ಷಕ ಮಂಜುನಾಥ ಅಕ್ಕಿ, ಗ್ರಾಮ ಆಡಳಿತಾಧಿಕಾರಿ ಮಹಾಂತೇಶ ತಡಕೋಡ ಹಾಗೂ ಪೋಲಿಸರು ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಗ್ರಾಮಸ್ಥರ ಬೇಡಿಕೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.