ಆಯುರ್ವೇದ ಶಿಕ್ಷಣ ಬಲಪಡಿಸಲು ಕಾಹೆರ ಬದ್ಧ

ಬೆಳಗಾವಿ ನಗರದ ಕೆಎಲ್‌ಇ ಕಾಹೆರ ಸಭಾಂಗಣದಲ್ಲಿ ಬುಧವಾರ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ರಂಜನಾ ಪರಿಹಾರ, ಟಿ.ಆರ್.ಶ್ರೀನಿವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಡಾ.ಸಂದೀಪ ಶ್ರೀವಾಸ್ತವ,  ಡಾ.ಬಿ.ಎಸ್.ಪ್ರಸಾದ ಇತರರಿದ್ದರು.
ಬೆಳಗಾವಿ ನಗರದ ಕೆಎಲ್‌ಇ ಕಾಹೆರ ಸಭಾಂಗಣದಲ್ಲಿ ಬುಧವಾರ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ರಂಜನಾ ಪರಿಹಾರ, ಟಿ.ಆರ್.ಶ್ರೀನಿವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಡಾ.ಸಂದೀಪ ಶ್ರೀವಾಸ್ತವ, ಡಾ.ಬಿ.ಎಸ್.ಪ್ರಸಾದ ಇತರರಿದ್ದರು.
Published on
ಬೆಳಗಾವಿ: ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಕಾಹೆರ), ನವದೆಹಲಿಯ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ ಹಾಗೂ ಚೆನ್ನೈ ಮೂಲದ ಸಿದ್ಧಾಂತ ನಾಲೆಡ್ಜ್ ಫೌಂಡೇಷನ್ ಭಾರತೀಯ ಜ್ಞಾನ ಪರಂಪರೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಬೆಳಗಾವಿ ನಗರದ ಕೆಎಲ್‌ಇ ಕಾಹೆರ ಸಭಾಂಗಣದಲ್ಲಿ ಬುಧವಾರ ನಡೆದ ಒಡಂಬಡಿಕೆಯಲ್ಲಿ ಕಾಹೆರ ಕುಲಸಚಿವ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಎಐಯು ಜಂಟಿ ಕಾರ್ಯದರ್ಶಿ ಡಾ.ರಂಜನಾ ಪರಿಹಾರ ಹಾಗೂ ಸಿದ್ಧಾಂತ ಗುಂಪಿನ ಉಪ ನಿರ್ದೇಶಕ ಟಿ.ಆರ್.ಶ್ರೀನಿವಾಸನ್ ಸಹಿ ಹಾಕಿದರು.
ಕಾಹೆರ ಕುಲಪತಿ ಪ್ರೊ.ಡಾ.ಸಂದೀಪ ಶ್ರೀವಾಸ್ತವ ಮಾತನಾಡಿ, ಈ ಒಪ್ಪಂದದ ಮೂಲಕ ಭಾರತೀಯ ಜ್ಞಾನ ಪರಂಪರೆಯ ಕ್ಷೇತ್ರದಲ್ಲಿ ಶೈಕ್ಷಣಿಕ ಸಹಕಾರ, ಸಂಶೋಧನಾ ಚಟುವಟಿಕೆ ಹಾಗೂ ಸಂಸ್ಥೆಗಳ ನಡುವಿನ ಸಹಭಾಗಿತ್ವ ವೃದ್ಧಿಸುವ ಉದ್ದೇಶವಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ 2020ರ ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಭಾರತದ ಸಾಂಸ್ಕೃತಿಕ ಜ್ಞಾನ ಪರಂಪರೆಯನ್ನು ಆಧುನಿಕ ಶಿಕ್ಷಣದಲ್ಲಿ ಅಳವಡಿಸಲು ಒತ್ತು ನೀಡುತ್ತದೆ. ಪರಂಪರೆಯ ಜ್ಞಾನ ವ್ಯವಸ್ಥೆ ಪುನರುತ್ಥಾನಗೊಳಿಸಲು ಮತ್ತು ಅವುಗಳನ್ನು ಆಧುನಿಕ ವೈಜ್ಞಾನಿಕ ಚಟುವಟಿಕೆಗಳೊಂದಿಗೆ ಸಂಯೋಜಿಸಲು ಅಂತರವಿಷಯಕ ದೃಷ್ಟಿಕೋನದ ಅಗತ್ಯವಿದೆ.
ಆಯುರ್ವೇದ ಮತ್ತು ಸಂಬಂಧಿತ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಶಿಕ್ಷಣ ಬಲಪಡಿಸಲು ಕಾಹೆರ ಬದ್ಧವಿದೆ ಎಂದರು.ಎಐಯು ಜಂಟಿ ಕಾರ್ಯದರ್ಶಿ ಡಾ.ರಂಜನಾ ಪರಿಹಾರ ಮಾತನಾಡಿ, ವಿಶ್ವವಿದ್ಯಾಲಯಗಳ ನಡುವೆ ಸಹಕಾರವನ್ನು ಉತ್ತೇಜಿಸುವಲ್ಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ ಮಹತ್ವದ ಪಾತ್ರ ವಹಿಸುತ್ತಿದ್ದು, ದೇಶಾದ್ಯಂತ ಪಠ್ಯಕ್ರಮಗಳಲ್ಲಿ ಭಾರತೀಯ ಜ್ಞಾನ ಪರಂಪರೆಯನ್ನು ಸೇರಿಸುವ ನವೀನ ಶಿಕ್ಷಣ ಕ್ರಮಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಕರ್ನಾಟಕದ ಸಂಸ್ಥಾತ್ಮಕ ಸಂಪರ್ಕ ವ್ಯವಸ್ಥಾಪಕ ಪ್ರಶಾಂತ ಬಾಬು, ಇಂಟಿಗ್ರೇಟಿವ್ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ.ಬಿ.ಎಸ್.ಪ್ರಸಾದ, ಕೆಎಲ್‌ಇ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಸುಹಾಸ ಕುಮಾರ ಶೆಟ್ಟಿ, ಕೇಂದ್ರದ ನೋಡಲ್ ಅಧಿಕಾರಿ ಡಾ.ಸುನೀತಾ ಪಾಟೀಲ, ಉಪ ಕುಲಸಚಿವೆ ಡಾ.ತೇಜಶ್ರೀ ಪ್ರಧಾನ, ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಪಡಶೆಟ್ಟಿ ಹಾಗೂ ಭಾರತೀಯ ಜ್ಞಾನ ಪರಂಪರೆ ಸಂಯೋಜಕ ಡಾ.ಪ್ರಶಾಂತ ಗಾಂವಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net