ಬೆಳಗಾವಿ ಸದಾಶಿವರ ನಗರದ ರಡ್ಡಿ ಭವನದಲ್ಲಿ ಮಂಗಳವಾರ ಟಿಟಿಡಿ ಮತ್ತು ಬೆಳಗಾವಿ ರಡ್ಡಿ ಸಂಘ ಪರಸ್ಪರ ಒಡಂಬಡಿಕೆ ಮಾಡಿಕೊಂಡವು. ಎಸ್.ನರೇಶ ಕುಮಾರ, ಲಕ್ಷ್ಮಣ ರೆಡ್ಡಿ , ರಾಮಣ್ಣಾ ಮುಳ್ಳೂರ, ಕಾಂತು ಜಾಲಿಬೇರಿ ಇತರರಿದ್ದರು.
Published on:
Copied
Follow Us
ಬೆಳಗಾವಿ: ಆಂಧ್ರಪ್ರದೇಶದ ತಿರುಮಲ ಬೆಟ್ಟದ ಮೇಲಿರುವ ವೆಂಕಟೇಶ್ವರ ಸ್ವಾಮಿ (ಬಾಲಾಜಿ) ದೇವಾಲಯ ಮಾದರಿಯಲ್ಲಿ, ಬೆಳಗಾವಿ ನಗರದ ಹೊರವಲಯದ ಏಳು ಎಕರೆ ಪ್ರದೇಶದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಬೃಹತ್ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ ಎಂದು ಟಿಟಿಡಿ ಆಡಳಿತ ಮಂಡಳಿಯ ಸದಸ್ಯ ಎಸ್.ನರೇಶ ಕುಮಾರ ತಿಳಿಸಿದರು.
ಸದಾಶಿವನಗರದ ರೆಡ್ಡಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ದೇವಸ್ಥಾನ ನಿರ್ಮಾಣಕ್ಕೆ ಬೆಳಗಾವಿ ರಡ್ಡಿ ಸಂಘವು 7 ಎಕರೆ ಜಮೀನನ್ನು ಟಿಟಿಡಿಗೆ ಹಸ್ತಾಂತರಿಸಿದೆ. ದೇವಸ್ಥಾನ ನಿರ್ಮಾಣ, ವೆಂಕಟೇಶ್ವರ ಮೂರ್ತಿ, ಕಟ್ಟಡದ ಕಲ್ಲು ಸೇರಿ ಎಲ್ಲವೂ ಆಂದ್ರಪ್ರದೇಶದಿಂದಲೇ ಬರಲಿವೆ. ಮುಂದಿನ ಎರಡು ವರ್ಷಗಳಲ್ಲಿ ದೇವಸ್ಥಾನ ನಿರ್ಮಾಣ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ ಎಂದರು.
ಕರ್ನಾಟಕ,ಮಹಾರಾಷ್ಟ್ರ, ಗೋವಾ ಮೂರು ರಾಜ್ಯದ ಕೇಂದ್ರ ಸ್ಥಾನವಾಗಿರುವ ಬೆಳಗಾವಿಯಲ್ಲಿ ವೆಂಕಟೇಶ್ವರ ನಿರ್ಮಾಣದಿಂದ ಲಕ್ಷಾಂತರ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.ಅಲ್ಲದೆ, 900 ಕಿಮೀ ದೂರದ ತಿರುಪತಿಗೆ ಹೋಗುವುದು ತಪ್ಪಲಿದೆ. ಮಹಾರಾಷ್ಟ್ರ ಕೊಲ್ಲಾಪುರದಲ್ಲಿರುವ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿಬರಲು ಭಕ್ತರಿಗೆ ಅವಕಾಶ ಸಿಗಲಿದೆ. ತಿರುಮಲದಲ್ಲಿರುವ ಧಾರ್ಮಿಕ ಕಾರ್ಯಕ್ರಮ ಮಾದರಿಯಲ್ಲಿಯೇ ಇಲ್ಲಿ ಪೂಜೆ-ವಿಧಾನಗಳು ನಡೆಯಲಿದ್ದು, ಭಕ್ತರಿಗೆ ವಸತಿ, ಪ್ರಸಾದ (ಲಾಡು) ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣದ 100 ಕೋಟಿ ರೂ. ವೆಚ್ಚದಲ್ಲಿ ಶೇ.80ರಷ್ಟು ಹಣವನ್ನು ಟಿಟಿಡಿ ಭರಿಸಲಿದೆ. ಬಾಕಿ ಉಳಿದಿರುವ ಶೇ.10ರಷ್ಟು ರಡ್ಡಿ ಸಂಘ ಹಾಗೂ ಶೇ.10ರಷ್ಟಯ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಗುವುದು. ಸರ್ಕಾರದಿಂದ ಯಾವುದೇ ರೀತಿಯ ಅನುದಾನ, ಸೌಲಭ್ಯ ಪಡೆದುಕೊಳ್ಳುತ್ತಿಲ್ಲ. ದಾನಿಗಳು, ಭಕ್ತರಿಂದಲೇ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಮಾತನಾಡಿ, ಬೆಳಗಾವಿಯಲ್ಲಿ ಟಿಟಿಡಿ ವತಿಯಿಂದ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇದಕ್ಕೆ ರೆಡ್ಡಿ ಸಂಘದ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಮನವಿ ಮಾಡಿದರು.
ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ವಿಕ್ರಂ ಜೈನ್, ಅವಿನಾಶ ಪೋತದಾರ, ಸುರೇಶ ದೇಸಾಯಿ, ಮಂಜುನಾಥ ಕೇಸೂರ, ಪ್ರಕಾಶ ಕಕರಡ್ಡಿ, ಡಾ. ಗಿರೀಶ ಸೋನವಾಲ್ಕರ ಕ ಇತರರಿದ್ದರು.
...................................
ಬಾಕ್ಸ್
ಪರಸ್ಪರ ಒಡಂಬಡಿಕೆ
ಸದಾಶಿವನಗರದ ರೆಡ್ಡಿ ಭವನದಲ್ಲಿ ಮಂಗಳವಾರ ಬೆಳಗಾವಿ ರೆಡ್ಡಿ ಸಂಘ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ನಡುವೆ ಭೂಮಿ ಹಸ್ತಾಂತರ ಒಡಂಬಡಿಕೆ ಕಾರ್ಯಕ್ರಮ ಜರುಗಿತು. ಬೆಳಗಾವಿ ನಗರದ ಹೊರವಲಯದಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸುಮಾರು ಏಳು ಎಕರೆ ಭೂಮಿಯನ್ನು ಅಧಿಕೃತವಾಗಿ ಟಿಟಿಡಿಗೆ ಹಸ್ತಾಂತರಿಸಲಾಯಿತು.