ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಮುಕ್ತಾಯ

ರಾಮದುರ್ಗ ಶಾಸಕರ ಗೃಹಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಗಿರೀಶ ಮೇಟಿ, ಶ್ರೀನಿವಾಸ ಅರಿಸಿಣಗೋಡಿ, ಟಿ.ಎನ್.ರುದ್ರಮುನಿ, ಜಿ.ಬಿ.ರಂಗನಗೌಡ್ರ ಇತರರಿದ್ದರು.
ರಾಮದುರ್ಗ ಶಾಸಕರ ಗೃಹಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಗಿರೀಶ ಮೇಟಿ, ಶ್ರೀನಿವಾಸ ಅರಿಸಿಣಗೋಡಿ, ಟಿ.ಎನ್.ರುದ್ರಮುನಿ, ಜಿ.ಬಿ.ರಂಗನಗೌಡ್ರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ರಾಮದುರ್ಗ
2017ರಲ್ಲಿ ಆರಂಭವಾದ ಬಹು ನಿರೀಕ್ಷಿತ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿಯನ್ನು ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಿ, ಕಾಲುವೆಗೆ ನೀರು ಹರಿಸಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.
ನಗರದ ಹೊರ ವಲಯದ ಶಾಸಕರ ಗೃಹಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 30 ಹಾಗೂ ಮುಧೋಳ ತಾಲೂಕಿನ 4 ಗ್ರಾಮಗಳ ವ್ಯಾಪ್ತಿಯ ಒಟ್ಟು 17 ಸಾವಿರಕ್ಕೂ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 544 ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಕಾರಣಾಂತರದಿಂದ ಕಾಮಗಾರಿ ವಿಳಂಬವಾಗಿದೆ. ಹೊಸ ಕ್ರಿಯಾ ಯೋಜನೆಯಂತೆ ಕಾಮಗಾರಿಗೆ 700 ಕೋಟಿ ರೂ. ವೆಚ್ಚ ತಗುಲುವ ನಿರೀಕ್ಷೆ ಇದೆ. ಮುಂದಿನ ತಿಂಗಳು ಹೊಸ ಟೆಂಡರ್ ಕರೆದು, ಕಾಮಗಾರಿ ಆರಂಭಿಸಲಾಗುವುದು. ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಳಿಸಲಾಗಿದೆ. ರೈತರ ಏಳಿಗೆಗೆ ರಾಜ್ಯ ಸರ್ಕಾರ ಬದ್ಧವಿದೆ ಎಂದ ಹೇಳಿದರು.
ಸಾಲಾಪುರ ಬಸವೇಶ್ವರ ಏತ ನೀರಾವರಿ ಕಾಮಗಾರಿ ಭರದಿಂದ ಸಾಗಿದ್ದು, ಸುಮಾರು 13,000 ಹೆಕ್ಟರ್ ರೈತರ ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಯೋಜನೆಗೆ ರೂ. 566 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಅಗತ್ಯ ಅನುದಾನ ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು. ಡಿಸೆಂಬರನಲ್ಲಿ ಯೋಜನೆ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದರು.
ಮಲಪ್ರಭಾ ಎಡದಂಡೆ ಕಾಲುವೆ ರಾಮದುರ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ ಮೇಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀನಿವಾಸ ಅರಿಸಿಣಗೋಡಿ, ಟಿ.ಎನ್.ರುದ್ರಮುನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಜಿ.ಬಿ.ರಂಗನಗೌಡ್ರ, ಮುಖಂಡರಾದ ಸುರೇಶ ತ್ತೇಪುರ, ಸಿದ್ಧಲಿಂಗಪ್ಪ ಸಿಂಗಾರಗೊಪ್ಪ, ಜಹೂರ್ ಹಾಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net