ಬೆಳಗಾವಿ : ಸಮುದಾಯ ಮತ್ತು ಕಾಪೋರೇಟ್ ಸಾಮಾಜಿಕ ಜವಾಬ್ದಾರಿಯೊಂದಿಗೆ ಉತ್ತಮ ಕಲಿಕೆ-ಉಜ್ವಲ ಭವಿಷ್ಯ ಘೋಷಣೆಯಡಿ ಕೆ.ಪಿ.ಎಸ್. ಶಾಲೆಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಅಭಿವೃದ್ಧಿ ಪಡಿಸಲು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜರುಗಿದ ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಸಿಎಸ್‌ಆರ್) ಅನುಷ್ಠಾನ ಜಿಲ್ಲಾ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಸಿಸಿಎಸ್‌ಆರ್ ನಿಧಿಯ ಸಮರ್ಪಕ ಬಳಕೆಗಾಗಿ ಜಿಲ್ಲಾ ಮಟ್ಟದಲ್ಲಿ ಸಿಸಿಎಸ್‌ಆರ್ ಕೋಶವನ್ನು ರಚಿಸಲಾಗಿದೆ. ನಿಧಿ ಬಳಸಿಕೊಂಡು ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಉದ್ಯಮಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬೆಳಗಾವಿ ಶೈಕ್ಷಣಿಕ ವಿಭಾಗದಲ್ಲಿ 91ಹಾಗೂ ಚಿಕ್ಕೋಡಿ ಶೈಕ್ಷಣಿಕ ವಿಭಾಗದಲ್ಲಿ 84 ಸರ್ಕಾರಿ ಶಾಲೆಗಳು ಸೇರಿ ಒಟ್ಟು 175 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲು ಈಗಾಗಲೇ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಸದರಿ ಶಾಲೆಗಳ ಅಭಿವೃದ್ಧಿಗೆ ಬೆಳಗಾವಿ ವಿಭಾಗದಲ್ಲಿ 24 ಉದ್ಯಮ ಸಂಸ್ಥೆಗಳು ಹಾಗೂ ಚಿಕ್ಕೋಡಿ ವಿಭಾಗದಲ್ಲಿ 25 ಉದ್ಯಮ ಸಂಸ್ಥೆಗಳನ್ನು ಸಿ.ಎಸ್.ಆರ್ ನಿಧಿಯ ಬಳಕೆಗೆ ಗುರುತಿಸಲಾಗಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಪಿಎಸ್ ಶಾಲೆಗಳ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಎರಡು ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಸಿಎಸ್‌ಆರ್ ನಿಧಿಯ ಮೂಲಕ ಶಾಲೆ ಹಾಗೂ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡುವುದರಿಂದ ಮತ್ತಷ್ಟು ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಚಿಕ್ಕೋಡಿ ವಿಭಾಗದ ಉಪನಿರ್ದೇಶಕ ಆರ್.ಎಸ್.ಸೀತಾರಾಮು, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಶಾಂತ, ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳು, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.