ಯೂನಿಯನ್ ಜಿಮಖಾನ್ ಕ್ಲಬ್ ಸೀಜ್

ಯೂನಿಯನ್ ಜಿಮಖಾನ್ ಕ್ಲಬ್ ಬಂದ್ ಮಾಡಿ ನೋಟಿಸ್ ಅಂಟಿಸಿದ ಸಿಬ್ಬಂದಿ.
ಯೂನಿಯನ್ ಜಿಮಖಾನ್ ಕ್ಲಬ್ ಬಂದ್ ಮಾಡಿ ನೋಟಿಸ್ ಅಂಟಿಸಿದ ಸಿಬ್ಬಂದಿ.
Published on
ಬೆಳಗಾವಿ: ಮೂರು ದಿನಗಳ ಹಿಂದೆ ಫೈರಿಂಗ್ ನಡೆದಿದ್ದ ಯೂನಿಯನ್ ಜಿಮಖಾನ್ ಕ್ಲಬ್‌ನ್ನು ರಕ್ಷಣಾ ಸಚಿವಾಲಯ ಗುರುವಾರ ಸೀಜ್ ಮಾಡಿ ಸುಪರ್ದಿಗೆ ಪಡೆದಿದೆ.
ರಕ್ಷಣಾ ಸಚಿವಾಲಯದ ಕರ್ನಾಟಕ ವಲಯದ ಎಸ್ಟೇಟ್ಸ್ ಅಧಿಕಾರಿ ದಿವ್ಯಾ ಹೊಸೂರ ನೇತೃತ್ವದಲ್ಲಿ ಕ್ಲಬ್‌ನ ಎಲ್ಲ ವಿಭಾಗಗಳನ್ನು ಬಂದ್ ಮಾಡಿ, ಎಲ್ಲ ಸಿಬ್ಬಂದಿ ಹೊರಹಾಕಿ, ಕ್ರಿಕೆಟ್ ಮೈದಾನವೂ ಸೇರಿ ಎಲ್ಲದಕ್ಕೂ ಪ್ರವೇಶ ನಿರ್ಬಂಧಿಸಿ ಮುಖ್ಯ ಗೇಟ್‌ಗೂ ಬೀಗ ಜಡೆದರು. ಕ್ಯಾಂಪ್ ಠಾಣೆ ಪೊಲೀಸರು ಹಾಗೂ ಮಿಲಿಟರಿ ಪಡೆ ಬಂದೋಬಸ್ತ್ ಒದಗಿಸಿತ್ತು.
ಕ್ಲಬ್‌ನ ಗುತ್ತಿಗೆ ಅವಧಿ 2002ರಲ್ಲಿ ಅಂತ್ಯಗೊಂಡಿತ್ತು. ಈ ಸಂಬಂಧ 23 ವರ್ಷಗಳಿಂದ ಕ್ಲಬ್ ಮತ್ತು ರಕ್ಷಣಾ ಸಚಿವಾಲಯದ ಮಧ್ಯೆ ಕಾನೂನು ಸಂಘರ್ಷ ನಡೆದಿತ್ತು. ಏ.6ರಂದು ಜಿಲ್ಲಾ ನ್ಯಾಯಾಲಯದ ತೀರ್ಪು ಪಶ್ನಿಸಿದ್ದ ಕ್ಲಬ್‌ನ ಅರ್ಜಿ ಧಾರವಾಡ ಹೈಕೋರ್ಟ್‌ನಲ್ಲಿ ವಜಾಗೊಂಡಿತ್ತು. ಈ ತೀರ್ಪಿನ ಹಿನ್ನೆಲೆ 6.5 ಎಕರೆ ಜಾಗವನ್ನು ತೆರವುಗೊಳಿಸಿ ಸುಪರ್ದಿಗೆ ತೆಗೆದುಕೊಂಡಿರುವುದಾಗಿ ರಕ್ಷಣಾ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಏ.6ರಂದೇ ತಮ್ಮ ಪರ ತೀರ್ಪು ಬಂದಿದ್ದರೂ ಮೂರು ತಿಂಗಳು ಎಸ್ಟೇಟ್ ಅಧಿಕಾರಿಗಳು ಸುಮ್ಮನೆ ಕುಳಿತಿದ್ದು ಯಾಕೆ? ಫೈರಿಂಗ್ ನಡೆದ ಬಳಿಕ ಎಚ್ಚೆತ್ತುಕೊಂಡಿರುವುದು ಏಕೆ? ಎಂಬ ಪ್ರಶ್ನೆ ಉದ್ಭವಿಸಿದೆ.
ಎಲ್ಲ ಚಟುವಟಿಕೆ ಬಂದ್: ಯೂನಿಯನ್ ಜಿಮಖಾನ್ ಕ್ಲಬ್ ಸಂಜೆ ಹೊತ್ತಿನ ಸಮಯ ಕಳೆಯುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಕ್ರಿಕೆಟ್ ಮೈದಾನ, ಟೆಬಲ್ ಟೆನ್ನಿಸ್ ಕೋಟ್ ಇದೆ. ನಿತ್ಯವೂ ಬೆಳಗ್ಗೆ ಮತ್ತು ಸಂಜೆ ವಿವಿಧ ಕ್ರೀಡಾ ಅಭ್ಯಾಸ ನಡೆಯುತ್ತಿದ್ದವು. ಈಗ ಅದೆಲ್ಲದಕ್ಕೂ ತಡೆ ಬಿದ್ದಿದೆ.
"

ಕ್ಲಬ್‌ಗೆ ಸಂಬಂಧವಿಲ್ಲದವರು ಏಕಾಏಕಿ ಒಳನುಗ್ಗಿ ಗಲಾಟೆ ಮಾಡಿದ್ದಾರೆ. ಲೀಸ್‌ಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ಈ ವಿಚಾರ ನೋಟಿಸ್‌ನಲ್ಲಿ ಪ್ರಸ್ತಾಪಿಸಿಲ್ಲ. ಮೊನ್ನೆಯ ಘಟನೆಯನ್ನೇ ನೆಪ ಮಾಡಿಕೊಂಡು ಮುನ್ಸೂಚನೆ ನೀಡದೆ ಸೀಜ್ ಮಾಡಿದ್ದಾರೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ.

— ಪ್ರಸನ್ನ ಸುಂಠನಕರ ಕ್ಲಬ್ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net