ಜಿಲ್ಲೆಯಲ್ಲಿ ಎರಡು ದಿನ ಹೋಳಿ ಹಬ್ಬ ಆಚರಣೆ

holi
holi
Published on
ಬೆಳಗಾವಿ: ಚಂದ್ರಗ್ರಹಣ ಹಿನ್ನೆಲೆ ಹೋಳಿ ಆಚರಣೆ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ನಗರದಲ್ಲಿ ಮಂಗಳವಾರ ಬಣ್ಣದಾಟವಿದ್ದರೆ, ಕೆಲ ಹಳ್ಳಿಗಳಲ್ಲಿ ಬುಧವಾರ ಹೋಳಿ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ಹೋಳಿಯಂದು ಇಡೀ ದಿನ ಪೂಜೆ ಮತ್ತು ಭಕ್ತರ ದರ್ಶನಕ್ಕೆ ಮುಕ್ತವಾಗುತ್ತಿದ್ದ ಪ್ರಮುಖ ದೇವಸ್ಥಾನಗಳನ್ನು ಗ್ರಹಣದಿಂದಾಗಿ ಮಂಗಳವಾರ(ಮಾ.3) ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಬಂದ್ ಮಾಡಲಾಗುತ್ತಿದೆ.
ಕೆಲ ಹಳ್ಳಿಗಳಲ್ಲಿ ಹಬ್ಬವನ್ನೇ ಒಂದು ದಿನ ಮುಂದೂಡಿದ್ದಾರೆ. ಗ್ರಹಣ ಮುಗಿದ ಬಳಿಕ ಕಾಮಣ್ಣನ ಪೂಜಾ ಕಾರ್ಯಗಳನ್ನು ಆರಂಭಿಸಿ, ಬುಧವಾರ ಮಧ್ಯಾಹ್ನದವರೆಗೆ ಬಣ್ಣವಾಡಿ, ಬಳಿಕ ಕಾಮಣ್ಣನ ದಹನ ಮಾಡಲು ನಿರ್ಧರಿಸಿದ್ದಾರೆ.
ಪಾಂಗುಳಗಲ್ಲಿಯ ಅಶ್ವತ್ಥಾಮ ದೇವಸ್ಥಾನದ ಎದುರು ಬೆಳಗ್ಗೆ 11ರಿಂದ ಮಧ್ಯಾಹ್ನ 3ವರೆಗೂ ಉರುಳು ಸೇವೆ ನಡೆಯುತ್ತಿತ್ತು. ಗ್ರಹಣದಿಂದ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 5.30ಕ್ಕೆ ಕಾಮಣ್ಣ ದಹನ, 8.30ರಿಂದ 10ರವರೆಗೆ ಉರುಳು ಸೇವೆ ನಂತರ ದೇವಸ್ಥಾನದ ಬಾಗಿಲು ಬಂದ್ ಮಾಡುತ್ತಿದ್ದಾರೆ. ಚವಾಟ್‌ಗಲ್ಲಿ ದೇವಸ್ಥಾನದ ಎದುರು ಬೆಳಗ್ಗೆ 9ಕ್ಕೆ ಕಾಮಣ್ಣ ದಹನ, ಪೂಜೆ ಕೈಗೊಂಡು ಸಂಜೆರವರೆಗೆ ಬಂದ್ ಇಡಲಿದ್ದಾರೆ.
ಬಿಗಿ ಭದ್ರತೆ: ಮಾ.2ರ ರಾತ್ರಿ ನಗರದ 329 ಸ್ಥಳಗಳಲ್ಲಿ ಕಾಮಣ್ಣ ದಹನ, ಮಾ.3ರಂದು 180 ಸ್ಥಳಗಳಲ್ಲಿ ಬಣ್ಣದಾಟದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಒಂದು ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ, 250 ಗೃಹರಕ್ಷಕ ಸಿಬ್ಬಂದಿ, ಕೆಎಸ್‌ಆರ್‌ಪಿ 7 ತುಕಡಿ, ಸಿಎಆರ್ 10 ತಂಡ ನಿಯೋಜಿಸಿದ್ದೇವೆ.
ಅಗ್ನಿ ಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ಸಹಯೋಗ ಪಡೆದಿದ್ದೇವೆ. 19 ಚೆಕ್‌ಪೋಸ್ಟ್ ಮಾಡಿ ಮದ್ಯಪಾನ ಮಾಡಿ ಓಡಾಡುವವರು ಮತ್ತು ಮಾರಕಾಸ್ತ್ರ ಇಟ್ಟುಕೊಂಡು ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 500ಕ್ಕೂ ಹೆಚ್ಚು ಸಿಸಿ ಕ್ಯಾಮರಾ, 8ಕ್ಕೂ ಹೆಚ್ಚು ಡ್ರೋನ್ ಕ್ಯಾಮರಾ ನಿಗಾ ಇಡಲಿವೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ನಾಳೆ ಮದ್ಯ ಮಾರಾಟ ನಿಷೇಧ: ಹೋಳಿ ಹಬ್ಬದ ಪ್ರಯುಕ್ತ ಮಾ.2ರಂದು ಮಧ್ಯಾಹ್ನ 2 ಗಂಟೆಯಿಂದ ಮಾ.3ರ ಮಧ್ಯರಾತ್ರಿ 11.59ರವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಆದೇಶ ಹೊರಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net