ಇಳುವರಿ ಹೆಚ್ಚಿಸಲು ತಂತ್ರಜ್ಞಾನಕ್ಕೆ ಮೊರೆ

ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿನೀಡುತ್ತಿರುವುದು.
ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿನೀಡುತ್ತಿರುವುದು.
Published on
ಬೆಳಗಾವಿ: ರಾಜ್ಯದಲ್ಲೇ ಪ್ರಥಮ ಬಾರಿಗೆ ಮಣ್ಣು, ನೀರು, ತ್ಯಾಜ್ಯ, ಸಮತೋಲನ ಪೋಷಕಾಂಶ ನಿರ್ವಹಣೆ ಹಾಗೂ ಕಬ್ಬು ಇಳುವರಿ ಹೆಚ್ಚಿಸಲು ಹೊಸ ತಂತ್ರಜ್ಞಾನ ಅನುಷ್ಠಾನಕ್ಕೆ ಸರ್ಕಾರ ಸಜ್ಜಾಗಿದ್ದು, ಪ್ರಾಯೋಗಿಕವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳ 3 ಸಾವಿರ ಹೆಕ್ಟೇರ್ ಪ್ರದೇಶ ಆಯ್ಕೆ ಮಾಡಿದೆ.
ನೀರಾವರಿ ಪ್ರದೇಶ ದಲ್ಲಿ ಕಬ್ಬು ಸೇರಿ ವಿವಿಧ ಬೆಳೆಗಳ ಇಳುವರಿ ಹೆಚ್ಚಿಸಲು ರೈತರು ಮಿತಿಮೀರಿ ರಾಸಾಯನಿಕ ಗೊಬ್ಬರ ಬಳಕೆ ಅವೈಜ್ಞಾನಿಕ ಔಷಧ ಸಿಂಪಡಣೆೆ, ಅನಿಯಮಿತ ನೀರು ಬಳಸುವುದರಿಂದ ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೆಲವೆಡೆ ಇಳುವರಿ ಪ್ರಮಾಣ ಶೇ.60 ಇಳಿಕೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಸಹಯೋಗದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ‘ಸಮಗ್ರ ಮಣ್ಣು, ನೀರು, ತ್ಯಾಜ್ಯ ನಿರ್ವಹಣೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆ’ ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದೆ.
ಬೆಳಗಾವಿ-29, ಬಾಗಲಕೋಟೆ-13, ವಿಜಯಪುರ-10, ಕಲಬುರಗಿ-4 ಹಾಗೂ ಮಂಡ್ಯ-5 ಸೇರಿ ಒಟ್ಟು 61 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ತಲಾ 35ರಿಂದ 40 ಹೆಕ್ಟೇರ್ ಭೂಮಿ ನೀಡಲಾಗುತ್ತಿದೆ. ಯೋಜನೆಗೆ ಆಯ್ಕೆಯಾಗುವ ರೈತರಿಗೆ ತರಬೇತಿ ನೀಡಿ, ಹನಿ ನೀರಾವರಿ, ಕಬ್ಬು ರವದಿ ಮರು ಬಳಕೆಗೆ ಯಂತ್ರಗಳ ಖರೀದಿ ಸೇರಿ ವಿವಿಧ ಆರ್ಥಿಕ ಸಹಾಯಧನ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.
ಈ ಯೋಜನೆಯಡಿ ಆಯ್ಕೆಯಾದ ರೈತರು ಕೃಷಿ ಜಮೀನಿನಲ್ಲಿ ಕಬ್ಬು ಬೆಳೆಯಲು ಹೊಸ ಪ್ರಯೋಗ ಅಳವಡಿಸಿಕೊಳ್ಳಬೇಕು. ಇದಕ್ಕೆಲ್ಲ ಸಹಾಯಧನ ಸೌಲಭ್ಯ ಕಲ್ಪಿಸಲಾಗುತ್ತಿದೆ. ನೀರಾವರಿ ಪ್ರದೇಶದ ಕೃಷಿ ಭೂಮಿ ಫಲವತ್ತತೆ, ಬೆಳೆಗಳ ಇಳುವರಿ ಹೆಚ್ಚಿಸಲು, ರಸಗೊಬ್ಬರ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆಗಳ ಸಹಯೋಗದಲ್ಲಿ ವಿನೂತನ ಪ್ರಯೋಗ ಇದಾಗಿದ್ದು, ಯಶಸ್ವಿಯಾದ ಬಳಿಕ ಎಲ್ಲೆಡೆ ವಿಸ್ತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"

ಕಬ್ಬು ಬೆಳೆಗಾರರು ಸಮಗ್ರ ಮಣ್ಣು, ನೀರು, ತ್ಯಾಜ್ಯ, ಸಮ ತೋಲನ ಪೋಷಕಾಂಶ ನಿರ್ವಹಣೆ ಯೋಜನೆ ಅಳವಡಿಸಿ ಕೊಂಡರೆ ಕಡಿಮೆ ಅವಧಿಯಲ್ಲಿ ಫಲಿತಾಂಶ ಬರುತ್ತದೆ. ಬೆಳೆ ಇಳುವರಿ ಹೆಚ್ಚಿಸಲು ಈ ಯೋಜನೆ ಹೆಚ್ಚು ಮಹತ್ವದ್ದಾಗಿದೆ.

"

ಇದೇ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆಗಳ ಸಹಯೋಗದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಡಿ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಐದು ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net