ಶಕ್ತಿ ಯೋಜನೆಗೆ ಸಾರಿಗೆ ಸಂಕಷ್ಟ!

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on
ಡಿ.ವಿ.ಕಮ್ಮಾರ ಬೆಳಗಾವಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಬೆಳಗಾವಿ ನಗರದ ಹಲವು ಭಾಗದ ಜನರಿಗೆ ದಶಕಗಳಿಂದ ‘ಸಿಟಿ ಬಸ್’ ಮರೀಚಿಕೆಯಾಗಿದೆ. ನಗರದ ಹೃದಯಭಾಗಕ್ಕೆ ಸಮೀಪವಿದ್ದರೂ ಶಹಾಪುರ, ಶಾಸ್ತ್ರಿನಗರ ಹಾಗೂ ಕಪಿಲೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಸಾರಿಗೆಯಿಲ್ಲದೆ ಪರದಾಡುವಂತಾಗಿದೆ.
ಕಪಿಲೇಶ್ವರ ದೇವಸ್ಥಾನದ ಎದುರು ಮತ್ತು ಮಾಣಿಕಬಾಗ್ ಬಳಿ ಮೇಲ್ಸೇತುವೆ ನಿರ್ಮಾಣವಾಗುವ ಮೊದಲು, ಮಹಾದ್ವಾರ ರಸ್ತೆ ಹಾಗೂ ಶನಿಮಂದಿರ ಮಾರ್ಗವಾಗಿ ಶಿವಾಜಿ ಉದ್ಯಾನದ ಮೂಲಕ ಶಹಾಪುರ ಮತ್ತು ವಡಗಾವಿಗೆ ನಿಯಮಿತವಾಗಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಮೇಲ್ಸೇತುವೆ ನಿರ್ಮಾಣದ ನಂತರ ಹಳೆಯ ಮಾರ್ಗಗಳು ಬಂದ್ ಆಗುವ ಜತೆಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪರ್ಯಾಯ ಮಾರ್ಗಗಳಿದ್ದರೂ ಬಸ್ ಓಡಿಸುವ ಚಿಂತನೆ ಈವರೆಗೂ ನಡೆದಿಲ್ಲ. ಹಳೇ ಪಿ.ಬಿ. ರಸ್ತೆಯಿಂದ ಕುಲಕರ್ಣಿ ಗಲ್ಲಿ, ಬ್ಯಾಂಕ್ ಆಫ್ ಇಂಡಿಯಾ ವೃತ್ತದ ಮೂಲಕ ಮಹಾತ್ಮ ಫುಲೆ ಮಾರ್ಗದಿಂದ ಬಸವೇಶ್ವರ ವೃತ್ತ ಸೇರುವ ದ್ವಿಪಥ ರಸ್ತೆ ನಿರ್ಮಾಣವಾದಾಗ, ಶಿವಾಜಿ ಉದ್ಯಾನದ ಮೂಲಕ ವಡಗಾವಿ ಬಸ್ ಸಂಚಾರ ಆರಂಭವಾಗಿ ಜನರಿಗೆ ಅನುಕೂಲವಾಗಿತ್ತು. ಆದರೆ, ಕೋರ್ಟ್ ವ್ಯಾಜ್ಯ ಕಾರಣಕ್ಕೆ ಹಳೇ ಪಿಬಿ ರಸ್ತೆ ಬಳಿ ರಸ್ತೆ ಬಂದ್ ಆಗಿದ್ದರಿಂದ ಪುನಃ ಬಸ್ ಸಂಚಾರ ಸ್ಥಗಿತಗೊಂಡಿದೆ.
ಶಹಾಪುರ, ಗೂಡ್ಸ್‌ಶೆಡ್ ರಸ್ತೆ, ಶಾಸ್ತ್ರಿನಗರ, ಕಪಿಲೇಶ್ವರ ಕಾಲನಿ, ತಹಸೀಲ್ದಾರ್ ಗಲ್ಲಿ, ಮಹಾದ್ವಾರ ರಸ್ತೆ, ಹುಲಬತ್ತಿ ಕಾಲನಿ, ಬಾಂಧೂರ ಗಲ್ಲಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸಿಟಿ ಬಸ್ ಏರಬೇಕೆಂದರೆ ಕಿ.ಮೀ.ಗಟ್ಟಲೇ ನಡೆಯುವುದು ಅನಿವಾರ್ಯವಾಗಿದೆ. ಮಾಣಿಕಬಾಗ್ (ವಿಆರ್‌ಎಲ್ ಕಚೇರಿ ಬಳಿ), ನಾಥಪೈ ವೃತ್ತ, ಬಸವೇಶ್ವರ ವೃತ್ತ, ಈ ಮೇಲಿನ ಯಾವುದಾದರೂ ಒಂದು ಪಾಯಿಂಟ್‌ಗೆ ನಡೆದುಕೊಂಡು ಹೋಗಿ ಬಸ್ ಹಿಡಿಯಬೇಕಿದೆ. ನಿತ್ಯವೂ ಓಡಾಡುವ ವಿದ್ಯಾರ್ಥಿಗಳು ಹಾಗೂ ವೃದಟಛಿರಿಗೆ ಇದು ಸಾಧ್ಯವಾಗದು ಹೀಗಾಗಿ, ಅನಿವಾರ್ಯವಾಗಿ ಆಟೋಗೆ ಹಣ ತೆರುವಂತಾಗಿದೆ.
ದೇವಸ್ಥಾನಕ್ಕೂ ಪಾದಯಾತ್ರೆ:
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಕಪಿಲೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಸ್ವಂತ ವಾಹನವಿಲ್ಲದ ಬಡವರು ದೇವಸ್ಥಾನಕ್ಕೆ ಬರಬೇಕಾದರೆ ವಿಆರ್‌ಎಲ್ ಕಚೇರಿ ಬಳಿ ಬಸ್ ಇಳಿದು, ಭಾತಖಾಂಡೆ ಶಾಲೆ ಅಥವಾ ಮಹಾದ್ವಾರ ರಸ್ತೆ ಮೂಲಕ ಸುದೀರ್ಘ ಹಾದಿ ಕ್ರಮಿಸಿ, ನಡೆದು ಬರಬೇಕಿದೆ.
ಬಸ್ ಓಡುತ್ತವೆ ನಿಲ್ಲುವುದಿಲ್ಲ:
ಪ್ರಮುಖ ರಸ್ತೆ ಸಂಚಾರ ಬಂದ್ ಆಗಿದೆ. ಬಸ್ ಓಡಾಟಕ್ಕೆ ಸಮರ್ಪಕ ಸ್ಥಳಾವಕಾಶವಿಲ್ಲ ಎಂಬ ನೆಪದಲ್ಲಿ ಈ ಮಾರ್ಗಗಳಲ್ಲಿ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರೂ ಇಲ್ಲಿರುವ ಪರ್ಯಾಯ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳೇ ಓಡಾಡುತ್ತವೆ. ಆದರೆ, ಅವುಗಳು ಇಲ್ಲಿ ನಿಲ್ಲುವುದಿಲ್ಲ. ಅನಗೋಳ, ವಡಗಾವಿ ಹಾಗೂ ಪೀರನವಾಡಿ ಭಾಗಗಳಲ್ಲಿ ಓಡಾಡುವ ತಡೆರಹಿತ ಬಸ್‌ಗಳು ಭಾತಖಾಂಡೆ ಶಾಲೆ ಇಲ್ಲವೆ ಶನಿಮಂದಿರ ಮೂಲಕ ಓಡಾಡುತ್ತವೆ. ಜತೆಗೆ ಬಸವೇಶ್ವರ ವೃತ್ತದಿಂದ ಆಚೆಗೆ ಖಾನಾಪುರ ಮಾರ್ಗದಲ್ಲಿ ಓಡಾಡುವ ನಗರ ಸಾರಿಗೆ ಬಸ್‌ಗಳು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮತ್ತಿತರ ಕಾರಣಕ್ಕೆ ಸಂಚಾರ ಸಿಕ್ಕು ಉಂಟಾದಾಗ ಇದೇ ಮಾರ್ಗದಲ್ಲಿ ಓಡಾಡುತ್ತವೆ. ಹೀಗಾಗಿ, ಬಸ್ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ತಾಂತ್ರಿಕವಾಗಿ ಗೊತ್ತಿದ್ದರೂ ಸಲ್ಲದ ನೆಪ ಹೇಳಿ ಈ ಭಾಗದ ಜನರು ನಗರ ಸಾರಿಗೆ ಬಸ್ ಸೌಕರ್ಯದಿಂದ ವಂಚಿತರಾಗುವಂತೆ ಮಾಡಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.
ಖಾಸಗಿ ವಾಹನಗಳ ಓಡಾಟ ಭರಪೂರ
ಈ ಭಾಗದಲ್ಲಿ ಸಾರಿಗೆ ಬಸ್ ಬಾರದಿದ್ದರೂ ನೂರಾರು ಖಾಸಗಿ ಶಾಲೆ, ಕಾಲೇಜು, ಕಂಪನಿಗಳ ಬಸ್‌ಗಳು ನಿತ್ಯವೂ ಓಡಾಡುತ್ತವೆ. ಹೀಗಾಗಿ, ಇಲ್ಲಿನ ಜನ ಬಸ್ ಸೌಲಭ್ಯವಿರುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವಿದ್ದರೂ, ಇಲ್ಲಿನ ಮಹಿಳೆಯರು ಅನಿವಾರ್ಯವಾಗಿ ಆಟೋಗಳಿಗೆ ಹಣ ಕೊಟ್ಟು ಓಡಾಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net