ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ದೆಹಲಿಯಲ್ಲಿ ತರಬೇತಿ ಭವನ

 ಬೆಳಗಾವಿಯಲ್ಲಿ ಭಾನುವಾರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಲಕ್ಷ್ಮಣರಾವ್ ಚಿಂಗಳೆ, ರಾಹುಲ ಶಿಂಧೆ, ಭೂಷಣ ಬೋರಸೆ ಇತರರಿದ್ದರು.
ಬೆಳಗಾವಿಯಲ್ಲಿ ಭಾನುವಾರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಲಕ್ಷ್ಮಣರಾವ್ ಚಿಂಗಳೆ, ರಾಹುಲ ಶಿಂಧೆ, ಭೂಷಣ ಬೋರಸೆ ಇತರರಿದ್ದರು.
Published on
ಬೆಳಗಾವಿ :ಯುಪಿಎಸ್‌ಸಿ ಪರೀಕ್ಷೆ ಬರೆಯುವ ರಾಜ್ಯದ ಬಡ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳ ಅನುಕೂಲಕ್ಕಾಗಿ ದೆಹಲಿಯಲ್ಲಿ ತರಬೇತಿ ಕೇಂದ್ರದ ಭವನ ನಿರ್ಮಿಸಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಿಂದ ಇಬ್ಬರು ಅಭ್ಯರ್ಥಿಗಳಿಗೆ ಭವನದಲ್ಲಿ ಪರೀಕ್ಷಾ ತಯಾರಿಗೆ ಅವಕಾಶ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಪಂದಿಂದ ಸುವರ್ಣ ವಿಧಾನಸೌಧದಲ್ಲಿ ಭಾನುವಾರ ಏರ್ಪಡಿಸಿದ್ದ ‘ಬೆಳಗಾವಿ ಬೆಳಕು 2025-26ನೇ ಸಾಲಿನ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳ ಹಾಗೂ ಸಾಧಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ವತಿಯಿಂದ ಶೈಕ್ಷಣಿಕವಾಗಿ ಜಿಲ್ಲೆ ಬಹಳಷ್ಟು ಪ್ರಗತಿ ಹೊಂದುತ್ತಿದೆ. ಕಲಿಕೆಯ ಆಸಕ್ತಿ ಪ್ರತಿ ಮಕ್ಕಳಲ್ಲಿರಬೇಕು. ಕಲಿಕಾ ಆಸಕ್ತಿ ಇದ್ದರೆ ಮಾತ್ರ ಸಾಧನೆ ಸಾಧ್ಯ. ಇಲ್ಲಿನ ಪ್ರತಿ ಮಕ್ಕಳು ಭವಿಷ್ಯದಲ್ಲಿ ಅಧಿಕಾರಿ, ವೈದ್ಯ, ಇಂಜಿನಿಯರ್, ವಿಜ್ಞಾನಿಗಳಾಗಬೇಕೆಂಬುದು ನಮ್ಮ ಆಶಯವಾಗಿದೆ. ಕಲಿಕೆಯ ನಂತರ ಕೌಶಲ, ಬುದ್ಧಿವಂತಿಕೆ ಮಾತ್ರ ಕೆಲಸ ಮಾಡಲಿದೆ. ಅಂಕ ಶಿಕ್ಷಣಕ್ಕೆ ಮಾತ್ರ ಸೀಮಿತ. ಹೀಗಾಗಿ ಸಾಮಾಜಿಕವಾಗಿ ಸಂದರ್ಭಗಳನ್ನು ನಿಭಾಯಿಸುವ ಕಲೆ, ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಮುಖ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಈ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಯುಪಿಎಸ್‌ಸಿ ಸಾಧಕರನ್ನು ಸನ್ಮಾನಿಸಲಾಗಿದೆ. ತಾವು ಮುಂದೆಯೂ ಕೂಡ ಇದೇ ರೀತಿ ಸಾಧನೆ ಮಾಡಬೇಕು. ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಸಾಧನೆಗೈದ ಬಸವರಾಜ ಕೆಂಪವಾಡ, ಕಿರಣ ಕಮತೆ, ರಾಹುಲ ಪಾಟೀಲ, ಬಸವರಾಜ ಎಂ ಪಾಟೀಲರನ್ನು ಸೇರಿದಂತೆ ಒಟ್ಟು 280 ಸಾಧಕರನ್ನು ಸನ್ಮಾನಿಸಲಾಯಿತು.
ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವಿನಯ ನವಲಗಟ್ಟಿ, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್ಪಿ ಕೆ.ರಾಮರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ, ರವಿ ಬಂಗಾರೆಪ್ಪನವರ, ಬಸವರಾಜ ಅಡವಿಮಠ, ಗಂಗಾಧರ ದಿವಟರ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net