ವ್ಯಾಪಾರಿಗಳ ಸೋಗಿನಲ್ಲಿ ಕಳ್ಳರು!

ಬೆಳಗಾವಿಯ ಮಾಳಮಾರುತಿ ಪೊಲೀಸರು ಈಚೆಗೆ ವ್ಯಾಪಾರಿಗಳ ಸೋಗಿನಲ್ಲಿದ್ದ ಕಳ್ಳರಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಚಿನ್ನಾಭರಣ.
ಬೆಳಗಾವಿಯ ಮಾಳಮಾರುತಿ ಪೊಲೀಸರು ಈಚೆಗೆ ವ್ಯಾಪಾರಿಗಳ ಸೋಗಿನಲ್ಲಿದ್ದ ಕಳ್ಳರಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಚಿನ್ನಾಭರಣ.
Published on
ಡಿ.ವಿ.ಕಮ್ಮಾರ ಬೆಳಗಾವಿ
ನಗರ ಸೇರಿದಂತೆ ಜಿಲ್ಲೆಯಲ್ಲಿ ಈಚೆಗೆ ಅಪರಾಧ ಪ್ರಕರಣಗಳು ವಿಭಿನ್ನ ಹಾದಿ ಹಿಡಿಯುತ್ತಿವೆ. ಹಗಲಿನಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಂತೆ ಬೀದಿ ಅಲೆಯುವವರು ರಾತ್ರಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿರುವುದು ಇತ್ತೀಚಿನ ಕೆಲ ಪ್ರಕರಣಗಳ ತನಿಖೆಯಲ್ಲಿ ಬಯಲಿಗೆ ಬಂದಿದೆ. ಮತ್ತೊಂದೆಡೆ ಜನದಟ್ಟಣೆ ಇರುವಲ್ಲಿ ಬ್ಯಾಗ್, ಸರಗಳ್ಳತನಕ್ಕೆ ಮಕ್ಕಳನ್ನು ಬಳಸಲಾಗುತ್ತಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕಿದೆ.
ಈಚೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಸ್ಥಳೀಯರು ಸೇರಿದಂತೆ ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ವಿಚಾರಣೆಯಲ್ಲಿ ಹೇಳಿದ ಕಳ್ಳತನದ ಶೈಲಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಹಗಲಿನಲ್ಲಿ ತಳ್ಳು ಗಾಡಿ, ಬುಟ್ಟಿಗಳಲ್ಲಿ ತರಕಾರಿ, ಹಣ್ಣುಗಳನ್ನಿಟ್ಟುಕೊಂಡು ಗಲ್ಲಿಗಳಲ್ಲಿ ಓಡಾಡುತ್ತ ‘ತುಂಬಾ ದಿನಗಳಿಂದ ಖರೀದಿಗೆ ಹೊರಗೆ ಬಾರದಿರುವುದು, ಕಸಗೂಡಿಸದಿರುವುದು, ರಂಗೋಲಿ ಹಾಕದಿರುವ ಮನೆಗಳನ್ನು’ ಪರಿಶೀಲಿಸುತ್ತಾರೆ. ವ್ಯಾಪಾರ ಮಾಡುತ್ತಲೇ ಕಳವಿಗೆ ರೂಪುರೇಷೆ ಸಿದ್ಧಪಡಿಸಿ, ರಾತ್ರಿ ಬೀಗ ಮುರಿದು ಚಿನ್ನಾಭರಣ, ಹಣ ಕದ್ದುಕೊಂಡು ಹೋಗುತ್ತಿದ್ದಾರೆ.
ಪ್ರಕರಣ 1:
ಮಾಳಮಾರುತಿ ಪೊಲೀಸರು ರಿಹಾನ್ ಮೈನುದ್ದೀನ್ ದಫೇದಾರ್ (18), ಮಲೀಕ್ ಖಲೀಲ್ ಹುಬ್ಬಳ್ಳಿ (26), ಅರ್ಮಾನ್ ಅಕ್ಬರ್ ಶೇಖ್ (18), ಖಲೀಲ್ ಇಸ್ಮಾಯಿಲ್ ಹುಬ್ಬಳ್ಳಿ (57) ಹಾಗೂ ಶಾನವಾಜ್ ಸಿರಾಜುದ್ದೀನ್ ಪಠಾಣ (23) ಅವರನ್ನು ಬಂಧಿಸಿ, 64,47,690 ರೂ. ಮೌಲ್ಯದ 415.98 ಗ್ರಾಂ ಚಿನ್ನ, 3,45,735 ರೂ. ಮೌಲ್ಯದ 1.329 ಕೆಜಿ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದರು.ಇದರಲ್ಲಿ ರಿಹಾನ್, ಮಲೀಕ್, ಅರ್ಮಾನ್ ವ್ಯಾಪಾರಿ ಸೋಗಿನಲ್ಲಿ ಓಡಾಡಿಕೊಂಡು ರಾತ್ರಿ ಕಳವು ಮಾಡಿದ ಸಾಮಗ್ರಿಗಳನ್ನು ಖಲೀಲ್ ಮತ್ತು ಶಾನವಾಜ್ ಇಟ್ಟುಕೊಳ್ಳುತ್ತಿದ್ದರು. ಇಂತಹ 11 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.
ಪ್ರಕರಣ 2:
ಶಹಾಪುರ ಠಾಣೆ ಪಕ್ಕದ ಭಾರತಿ ನಗರದಲ್ಲಿ ಮನೆ ಕಳ್ಳತನದಲ್ಲಿ ದೆಹಲಿಯ ಚಿಂಟು ಕುಟಿ ವಿಶ್ವಾಸ (52)ನನ್ನು ಬಂಧಿಸಿದ್ದ ಶಹಾಪುರ ಠಾಣೆ ಪೊಲೀಸರು, 44.86 ಲಕ್ಷ ರೂ. ಮೌಲ್ಯದ 294.190 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ಈತನೂ ಹಣ್ಣು, ತರಕಾರಿ ಮಾರುತ್ತ ಮನೆಗಳನ್ನು ಗುರುತಿಸುತ್ತಿರುವುದಾಗಿ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ.
ಮಕ್ಕಳ ಬಳಕೆ:
ಈಚೆಗೆ ಬಸ್ ನಿಲ್ದಾಣದಲ್ಲಿ ಸರಗಳ್ಳತನಕ್ಕೆ ಮಕ್ಕಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಮಕ್ಕಳು ಭಿಕ್ಷುಕರಂತೆ ಕೇಂದ್ರ ಬಸ್ ನಿಲ್ದಾಣದಲ್ಲಿ ಓಡಾಡಿಕೊಂಡಿದ್ದರೆ, ಇನ್ನೊಂದಿಷ್ಟು ಮಕ್ಕಳು ಚೆನ್ನಾಗಿ ಉಡುಗೆ ತೊಡುಗೆ ಧರಿಸಿಕೊಂಡು ದಟ್ಟಣೆ ಬಸ್‌ಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮಕ್ಕಳಾದ ಕಾರಣ ಪ್ರಯಾಣಿಕರು ಅಷ್ಟಾಗಿ ಅನುಮಾನಿಸುವುದಿಲ್ಲ. ಸಿಕ್ಕರೆ ತಮ್ಮ ಹೆಸರು ಹೇಳುವುದಿಲ್ಲ. ತಾವು ಬಚಾವ್ ಆಗಬಹುದೆಂದು ಕಳ್ಳರು ಈ ತಂತ್ರ ಬಳಸುತ್ತಿದ್ದಾರೆ. ಚಿನ್ನದ ಬೆಲೆ ಏರುತ್ತಿದ್ದಂತೆಯೇ ಕಳ್ಳತನದ ಹಾವಳಿಯೂ ಹೆಚ್ಚಾಗುತ್ತಿದ್ದು, ಜನರನ್ನು ಯಾಮಾರಿಸಲು ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಎಚ್ಚರ ವಹಿಸುವುದು ಅಗತ್ಯವಾಗಿದೆ.
  • ಹೊಸ ವ್ಯಾಪಾರಿಗಳು ಬಂದಾಗ ಎಚ್ಚರ ವಹಿಸಿ
  • ಹೊಸಬರಿದ್ದಲ್ಲಿ ನಂಬಬಾರದು
  • ಪರ ಊರಿಗೆ ಹೋಗುವಾಗ ಪೊಲೀಸ್ ಠಾಣೆಗೆಮಾಹಿತಿ ನೀಡಿ
  • ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಪ್ರಯೋಜನಪಡೆಯಿರಿ
  • ಬಸ್ ಮತ್ತು ದಟ್ಟಣೆ ಪ್ರದೇಶಗಳಲ್ಲಿ ಅಪರಿಚಿತಮಕ್ಕಳಿಂದ ಜಾಗೃತರಾಗಿರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net