ಬೆಳಗಾವಿ: ಆಷಾಢ ಏಕಾದಶಿಯು ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾಗಿದೆ. ಅಷಾಢ ದಿಂಡಿ ಪಾದಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಮಾನವೀಯ ಮೌಲ್ಯ ಹಾಗೂ ಏಕತೆಯ ಸಂದೇಶವನ್ನು ಸಾರುತ್ತವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಆಷಾಢ ಏಕಾದಶಿ ಅಂಗವಾಗಿ ಸಾಂಬ್ರಾ ಗ್ರಾಮದಿಂದ ಆಯೋಜಿಸಿರುವ ವಿಠ್ಠಲರುಕ್ಮಾಯಿ ಪಂಢರಪುರ ದಿಂಡಿ ಪಾದಯಾತ್ರೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರ ಮೇಲೆ ವಿಠ್ಠಲನ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
ಭಜನೆ, ನಾಮಸ್ಮರಣೆ ಹಾಗೂ ಭಕ್ತಿಗೀತೆಗಳ ನಡುವೆ ಆರಂಭವಾದ ಪಾದಯಾತ್ರೆಯಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಂಪ್ರದಾಯಬದ್ಧ ವೇಷಭೂಷಣ ಧರಿಸಿದ್ದ ವಾರಕರಿಗಳು ವಿಠ್ಠಲ ವಿಠ್ಠಲ ಎಂಬ ನಾಮಘೋಷದೊಂದಿಗೆ ಸಾಗಿದ ದೃಶ್ಯ ಗಮನ ಸೆಳೆಯಿತು.