ಪುಸ್ತಕಗಳಿವೆ, ಓದುಗರಿದ್ದಾರೆ ಆದರೆ ಗ್ರಂಥಪಾಲಕರೇ ಇಲ್ಲ!

ಬೆಳಗಾವಿ ನಗರದ ಕೇಂದ್ರ ಗ್ರಂಥಾಲಯ ಓದುಗರಿಂದ ಭರ್ತಿಯಾಗಿದೆ.
ಬೆಳಗಾವಿ ನಗರದ ಕೇಂದ್ರ ಗ್ರಂಥಾಲಯ ಓದುಗರಿಂದ ಭರ್ತಿಯಾಗಿದೆ.
Published on

ಬೆಳಗಾವಿ :

ಪುಸ್ತಕಗಳ ಸಾಲು, ಜ್ಞಾನ ಅರಸುವ ಓದುಗರು, ಆದರೆ ಪುಸ್ತಕಗಳನ್ನು ಓದುಗರ ಕೈಗೆ ತಲುಪಿಸುವ ವೃತ್ತಿಪರ ಗ್ರಂಥಪಾಲಕರೇ ಇಲ್ಲ! ರಾಜ್ಯದ ಸಾವಿರಾರು ಗ್ರಂಥಾಲಯಗಳ ಇಂದಿನ ಸ್ಥಿತಿ ಇದು.

ಹೌದು.ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ 1,301 ಗ್ರಂಥಾಲಯ, ಗ್ರಾಮ ಪಂಚಾಯಿತಿಗಳ ಮೂಲಕ 5 ಸಾವಿರಕ್ಕೂ ಅಧಿಕ ಗ್ರಂಥಾಲಯಗಳು ಸೇರಿ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ನ್ಯಾಯಾಲಯಗಳು, ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸರಾಸರಿ 8 ರಿಂದ 10 ಸಾವಿರಕ್ಕೂ ಅಧಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದೆ.ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಂಥಾಲಯಗಳಿಗೆ ಅಗತ್ಯವಿರುವ 2,500 ಗ್ರಂಥಪಾಲಕರು ಹಾಗೂ 5 ಸಾವಿರಕ್ಕೂ ಅಧಿಕ ಸಹಾಯಕ ಗ್ರಂಥಪಾಲಕರ ಹುದ್ದೆಗಳು ಮಾತ್ರ ಭರ್ತಿಯಾಗಿಲ್ಲ.
2009ರಲ್ಲಿ ಗ್ರಂಥಪಾಲಕರು ಮತ್ತು ಸಹಾಯಕ ಗ್ರಂಥಪಾಲಕರ ಹುದ್ದೆಗಳು ಭರ್ತಿಯಾಗಿದ್ದವು. ಬಳಿಕ ಸರ್ಕಾರವು ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಿಲ್ಲ. ಬದಲಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನಿಯೋಜನೆ ಮಾಡುತ್ತಿದೆ. ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆಮ ಸಹಾಯಕ ಗ್ರಂಥಪಾಲಕ, ಇಲಾಖೆ ಪ್ರತಿ ತಿಂಗಳು ನೀಡುವ ಸಂಬಳ ದೊರಕುತ್ತಿಲ್ಲ. ಹಲವು ಹುದ್ದೆಗಳು ವರ್ಷಗಳಿಂದ ಹುದ್ದೆಗಳು ಖಾಲಿ ಉಳಿದಿದ್ದು, ಅನುದಾನದ ಕೊರತೆಯೂ ಗ್ರಂಥಾಲಯಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ.
ರಾಜ್ಯ ಕೇಂದ್ರ, ಜಿಲ್ಲಾ ಕೇಂದ್ರ, ನಗರ ಕೇಂದ್ರ ಹಾಗೂ ತಾಲ್ಲೂಕು ಸಾರ್ವಜನಿಕ ಗ್ರಂಥಾಲಯಗಳು, ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ, ಎಂಜಿನಿಯರಿಂಗ್ ಹಾಗೂ ಪಿಯು ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ಪಬ್ಲಿಕ ಶಾಲೆಗಳು ಮಾತ್ರವಲ್ಲದೆ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ವಿಧಾನಸೌಧ, ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಗ್ರಂಥಾಲಯಗಳಲ್ಲಿಯೂ ಗ್ರಂಥಪಾಲಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಉಳಿದಿವೆ. ಹೀಗಾಗಿವೃತ್ತಿಪರ ಸಿಬ್ಬಂದಿಯ ಕೊರತೆಯಿಂದ ಗ್ರಂಥಾಲಯಗಳ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಪದವಿಪೂರ್ವ ಹಂತದಲ್ಲಿಯೇ ಗ್ರಂಥಾಲಯ ವಿಜ್ಞಾನವನ್ನು ವೃತ್ತಿಪರ ಕೋಸ್ ಆಗಿ ಕಲಿಯುವ ಅವಕಾಶವಿತ್ತು. ಎರಡು ವರ್ಷಗಳ ಈ ಕೋರ್ಸ್‌ಗೆ ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನ ಮಾನ್ಯತೆ ನೀಡಲಾಗಿತ್ತು. ಗ್ರಂಥಾಲಯ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದ ಈ ಕೋರ್ಸ್‌ಗಳಿಗೆ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆಯಿತ್ತು.ಆದರೆ, ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ತರಬೇತಿ ಕೋರ್ಸ್‌ಗೆ ಪ್ರವೇಶ ನಿರ್ಬಂಧಿಸಿದ ಬಳಿಕ ಗ್ರಂಥಾಲಯ ವಿಜ್ಞಾನ ಕೋರ್ಸ್‌ಗಳತ್ತ ವಿದ್ಯಾರ್ಥಿಗಳ ಆಸಕ್ತಿ ಕುಸಿದಿದೆ ಎಂದು ಗ್ರಂಥಾಲಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
......................................
ಬಾಕ್ಸ್
ರಾಜ್ಯದಲ್ಲಿ ಗ್ರಂಥಾಲಯಗಳ ವಿವರ
* ರಾಜ್ಯ ಕೇಂದ್ರ ಗ್ರಂಥಾಲಯ-1
* ಮಕ್ಕಳ ಗ್ರಂಥಾಲಯ -1
*ಜಿಲ್ಲಾ ಕೇಂದ್ರ ಗ್ರಂಥಾಲಯ- 30
* ನಗರ ಕೇಂದ್ರ ಗ್ರಂಥಾಲಯ- 26
* ಸಂಚಾರಿ ಗ್ರಂಥಾಲಯ-3
* ಗ್ರಾಪಂ ಗ್ರಂಥಾಲಯ -4,840
* ಶಾಲಾ, ಕಾಲೇಜು ಗ್ರಂಥಾಲಯ-1,600
* ಖಾಸಗಿ ಗ್ರಂಥಾಲಯ - 3,200
* ಇತರೆ ಗ್ರಂಥಾಲಯ-1,200
......................
ಕೋಟ್ಸ್
ಸದ್ಯ ರಾಜ್ಯದಲ್ಲಿ 6 ಸಾವಿರ ಗ್ರಾಮೀಣ, 4 ಸಾವಿರ ನಗರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿವೆ.ಆದರೆ, ವರ್ಷಗಳಿಂದ ಖಾಲಿ ಉಳಿದಿರುವ ಗ್ರಂಥಪಾಲಕರು ಸೇರಿ ಇತರೆ ಹುದ್ದೆಗಳ ಭರ್ತಿ ನನೆಗುದಿಗೆ ಬಿದ್ದಿದೆ. ಶೀಘ್ರವೇ ಸರ್ಕಾರಕ್ಕೆ ಗ್ರಂಥಾಲಯ ಎದುರಿಸುತ್ತಿರುವ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲಾಗುವುದು.
- ಡಾ.ಪಿ.ವಿ.ಕೊಣ್ಣೂರ, ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ
.............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net