ಕಾರ್ಮಿಕನ ಮಗ ಅಂಕಿತ ರಾಜ್ಯಕ್ಕೆ ದ್ವಿತೀಯ

ಅಂಕಿತ ಕಾರಟಗಿ
ಅಂಕಿತ ಕಾರಟಗಿ
Published on
ಬೆಳಗಾವಿ
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ವಿದ್ಯಾರ್ಥಿಯೊಬ್ಬನು ತನ್ನ ಪರಿಶ್ರಮ, ಶಿಸ್ತು ಮತ್ತು ವಿದ್ಯೆಯ ಮೇಲಿನ ಅಚಲ ನಿಷ್ಠೆಯಿಂದ ರಾಜ್ಯ ಮಟ್ಟದಲ್ಲಿ ಅಸಾಧಾರಣ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿ ಅಂಕಿತ ಕಾರಟಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾನೆ.ಈ ಸಾಧನೆ ಕೇವಲ ಅಂಕಿತನ ವೈಯಕ್ತಿಕ ಜಯವಷ್ಟೇ ಅಲ್ಲ, ಬಡತನ ಮತ್ತು ಸಂಕಷ್ಟಗಳ ನಡುವೆ ಕೂಡ ಕನಸು ಕಂಡು ಶ್ರಮಿಸಿದರೆ ಎತ್ತರದ ಶಿಖರಗಳನ್ನು ತಲುಪಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
ಗೋಕಾಕ ತಾಲೂಕಿನ ರಾಜಾಪುರ ಗ್ರಾಮದ ಹುಟ್ಟಿ ಬೆಳೆದ ಅಂಕಿತ ಅವರ ತಂದೆ ಭೀಮಪ್ಪ ಕಾರಟಗಿ ಸಿಮೆಂಟ್ ಅಂಗಡಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ದಿನಗೂಲಿ ಕೆಲಸದ ಮೇಲೆ ಕುಟುಂಬದ ಜೀವನ ಸಾಗುತ್ತಿರುವ ಪರಿಸ್ಥಿತಿಯಲ್ಲಿಯೂ ಮಗನ ವಿದ್ಯಾಭ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಪ್ರೋತ್ಸಾಹ ನೀಡಿರುವುದು ಈ ಸಾಧನೆಗೆ ಬಲವಾದ ಆಧಾರವಾಗಿದೆ.ಆರ್ಥಿಕ ಅಡಚಣೆಗಳು, ಸೀಮಿತ ಸೌಲಭ್ಯಗಳು, ಸರಳ ಬದುಕು ಇವೆಲ್ಲದರ ನಡುವೆಯೂ ಅಂಕಿತನು ತನ್ನ ಗುರಿಯತ್ತ ನಿರಂತರವಾಗಿ ಹೆಜ್ಜೆ ಹಾಕಿದ್ದಾನೆ. ಓದಿನ ಮೇಲಿನ ಆಸಕ್ತಿ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ತ್ಯಾಗದಿಂದಲೇ ಈ ಯಶಸ್ಸು ಸಾಧ್ಯವಾಗಿದೆ.
................
.........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net