ಇ-ಆಫೀಸ್ ಅನುಷ್ಠಾನಕ್ಕೆ ಹರಸಾಹಸ!

ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆ
Published on
ಬೆಳಗಾವಿ
ಆರ್ಥಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು ‘ ಇ-ಆಫೀಸ್ ತಂತ್ರಾಂಶ’ ಅನುಷ್ಠಾನಕ್ಕೆ ಹರಸಾಹಸ ಪಡುತ್ತಿವೆ!
ಹೌದು. ಬೆಳಗಾವಿ ಮಹಾನಗರ ಪಾಲಿಕೆ, ಗೋಕಾಕ, ನಿಪ್ಪಾಣಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಗರಿತ ನಿಗದಿತ ಸಮಯದಲ್ಲಿ ಸೇವಾ ಸೌಲಭ್ಯ ಕಲ್ಪಿಸುವುದು, ಆಡಳಿತದಲ್ಲಿ ಪಾರದರ್ಶಕತೆ, ಸಿಬ್ಬಂದಿ ಕೊರತೆ ನಿಗಿಸುವ ಉದ್ದೇಶದಿಂದ ಇ-ಆಫೀಸ್ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೆ, ಸಿಬ್ಬಂದಿ, ಅನುದಾನ ಕೊರತೆ, ಸಿಬ್ಬಂದಿಗೆ ಕೆಲಸದ ಒತ್ತಡ, ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡದಿರುವುದು,ಆಡಳಿತ ಮಂಡಳಿ ಸಹಕಾರ ನೀಡದಿರುವ ಹಿನ್ನೆಲೆ ಯೋಜನೆ ವರ್ಷದಿಂದ ಅರ್ಧದಲ್ಲಿಯೇ ಮೊಟಕುಗೊಂಡಿದೆ.
ಜಿಲ್ಲೆಯಲ್ಲಿ ಅತ್ಯಂತ ಹಳೆಯದಾದ ಬೆಳಗಾವಿ ಮಹಾನಗರ ಪಾಲಿಕೆ, ಗೋಕಾಕ,ನಿಪ್ಪಾಣಿ, ಬೈಲಹೊಂಗಲ, ಸವದತ್ತಿ ನಗರ ಸಭೆ, ಪುರಸಭೆ ಸೇರಿ ವಿವಿಧ ಪಪಂ ವ್ಯಾಪ್ತಿಯಲ್ಲಿ 1960ಕ್ಕಿಂತ ಹಿಂದಿನ ಹಳೆಯದಾದದ 40ಲಕ್ಷಕ್ಕೂ ಅಧಿಕ ಆಸ್ತಿ, ಆರ್ಥಿಕ ವ್ಯವಹಾರ ದಾಖಲೆ, ಬಾಂಡ್ ಪೇಪರ್‌ಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಈ ದಾಖಲೆ ಡಿಜಿಟಲೀಕರಣಗೊಳಿಸುವ ಕಾರ್ಯ 2021ರಲ್ಲಿಯೇ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ, ಸಿಬ್ಬಂದಿ ಕೊರತೆ ನಾನಾ ಕಾರಣಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ.ಕೆಲ ಭಾಗದಲ್ಲಿ ಇ-ಆಫೀಸ್ ತಂತ್ರಾಂಶವನ್ನೇ ಅನುಷ್ಠಾನ ಮಾಡಿಕೊಳ್ಳದಿರುವುದು ಕೂಡ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಸದ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶೇ.60ರಷ್ಟು ಹಳೆಯದಾದದ ದಾಖಲೆ ಸಿಗುತ್ತಿಲ್ಲ. ಬಹುತೇಕ ಆಸ್ತಿಯ ಮೂಲ ಮಾಲೀಕರ ದಾಖಲೆ ಕೂಡ ಇಲ್ಲ. ಇವು ಪತ್ತೆ ಹಚ್ಚಿ ಸ್ಕಾೃನಿಂಗ್ ಮಾಡುವ ಕೆಲಸ 2023ರಿಂದ ನಡೆಯುತ್ತಿದೆ. ಆದರೆ, ಇಲ್ಲಿಯವರೆಗೆ ದಾಖಲೆ ಸಿಕ್ಕಿಲ್ಲ. ಭೌತಿಕವಾಗಿ ಕಡತಗಳನ್ನು ನಿರ್ವಹಣೆ ಮಾಡುತ್ತಿವೆ. ಹೀಗಾಗಿ ಕಚೇರಿಗಳಲ್ಲಿನ ಹಲವು ದಶಕಗಳ ಹಳೆಯ ಕಡತಗಳ ಸ್ಕಾೃನಿಂಗ್ ಮತ್ತು ಡಿಜಿಟಲೀಕರಣ ಅರ್ಧಕ್ಕೆ ಮೊಟಕುಗೊಂಡಿದೆ. ಅಲ್ಲದೆ, ಇಲಾಖೆಯ ಪೋರ್ಟಲ್‌ನಲ್ಲಿ ಸಾರ್ವಜನಿಕರಿಗೆ ದಾಖಲುಗಳು ಲಭ್ಯವಾಗುತ್ತಿಲ್ಲ. ಜನರು ತೆರಿಗೆ ಕಟ್ಟುವುದು ಸೇರಿ ಪ್ರತಿಯೊಂದು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಆಸ್ತಿ ತೆರಿಗೆ ಪರಿಣಾಮ ಬೀರಿದ್ದು, ಶೇ,30ರಷ್ಟು ತೆರಿಗೆ ವಸೂಲಿ ಬಾಕಿ ಉಳಿಯುತ್ತಿದೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
..................
ಬಾಕ್ಸ್
ಎ ಮತ್ತು ಬಿ -ಖಾತಾ ಸ್ಥಗೀತ
ಪಾಲಿಕೆ ಸೇರಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನಧಿಕೃತ ಸ್ವತ್ತುಗಳಿಗೆ ಇ- ಆಸ್ತಿ ಸೃಜನೆ ಮಾಡಿ ಬಿ-ಖಾತಾ ನೋಂದಣಿ ಕಾರ್ಯ ಸ್ಥಗೀತಗೊಂಡಿದೆ. ಒಟ್ಟು ಆಸ್ತಿಯ ಶೇ.35ರಷ್ಟು ಆಸ್ತಿಯ ಮೂಲ ದಾಖಲೆ ಸಿಗುತ್ತಿಲ್ಲ. ಹೀಗಾಗಿ ಈ ಆಸ್ತಿಗಳಿಗೆ ಎ ಅಥಾವ ಬಿ -ಖಾತಾ ನೀಡಲು ಸಾಧ್ಯವಾಗುತ್ತಿಲ್ಲ.ಅನಧಿಕೃತ ಬಡಾವಣೆ, ಭೂ ಪರಿವರ್ತನೆ ಹೊಂದದೆ ಸ್ವಂತವಾಗಿ ತಮ್ಮದೇ ಮಾಲೀಕತ್ವ ಹೊಂದಿದ ನಿವೇಶನ, ಜಾಗಗಳಲ್ಲಿ ನಿರ್ಮಿಸಿಕೊಂಡಿರುವ ಅನಧಿಕೃತ ನಿವೇಶನ, ಕಟ್ಟಡ ನೋಂದಣಿ ಕಾರ್ಯಕೂಡ ಅರ್ಧಕ್ಕೆ ಮೊಟಕುಗೊಂಡಿದೆ.
.............................
ಬಾಕ್ಸ್
ಸಿಬ್ಬಂದಿ ಕೊರತೆ ಎಫೆಕ್ಟ್
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರಾಯುಕ್ತ ದಜೆ-1,ದಜೆ-2, ಕಾರ್ಯಪಾಲಕ , ಸಹಾಯಕ, ಪರಿಸರ ಅಭಿಯಂತರರು,ಮುಖ್ಯಾಧಿಕಾರಿ, ಲೆಕ್ಕಾಧಿಕಾರಿ, ಆರೋಗ್ಯ ನಿರೀಕ್ಷಿಕರು, ಕಂದಾಯ ಅಧಿಕಾರಿ, ಕರ ವಸೂಲಿ ಕಾರರು, ಪೌರ ಕಾರ್ಮಿಕರು ಸೇರಿ ವಿವಿಧ ಭಾಗಗಳಿಗೆ 3137 ಹುದ್ದೆಗಳು ಮಂಜೂರಾಗಿವೆ. ಆದರೆ, ಕಾರ್ಯನಿರ್ವಹಿಸುತ್ತಿರುವ 1274 ನೌಕರರು ಮಾತ್ರ. ಖಾಲಿ ಉಳಿದಿರುವ 1863 ಹುದ್ದೆಗಳು 2020ರಿಂದ ಖಾಲಿ ಉಳಿದುಕೊಂಡಿವೆ. ಹೀಗಾಗಿ ಕಚೇರಿ ಕೆಲಸಗಳು ಪೂರ್ಣಗೊಳ್ಳುತ್ತಿಲ್ಲ.
....................
ಬಾಕ್ಸ್
ನಗರ ಸ್ಥಳೀಯ ಸಂಸ್ಥೆಯಲ್ಲಿ ಅಂದಾಜು ಆಸ್ತಿ ವಿವರ
ವಿಭಾಗ ಅಂಕಿ ಸಂಖ್ಯೆ (ಲಕ್ಷ)
ಒಟ್ಟು ಆಸಿ 4.54
ಬಿ-ಖಾತಾ ಆಸ್ತಿ 2.07
ಎ.ಖಾತಾ ಆಸ್ತಿ 2.20
ಬಾಂಡ್ ಮೇಲಿರುವ ಆಸ್ತಿ 40.20 ಸಾವಿರ
.....................................
ಕೋಟ್ಸ್
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಗಳಿಗೆ ಹಳೆ ದಾಖಲೆ ಸಂರಕ್ಷಣೆ ಜತೆಗೆ ಇ-ಆಫೀಸ್ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಳೆಯ ದಾಖಲೆ ಸ್ಕಾೃನಿಂಗ್ ಮಾಡಿ ಇ-ತಂತ್ರಾಂಶದಲ್ಲಿ ಅಳವಡಿಸಬೇಕು. ಇದಕ್ಕಾಗಿ ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
.............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net