ಬೀಗ ಹಾಕಿದ ಮನೆಗೆ ಪೊಲೀಸರೇ ಕಾವಲು!

 ಬೆಳಗಾವಿ ನಗರದಲ್ಲಿ ‘ಬೀಗ ಹಾಕಿದ ಮನೆ ಗಸ್ತು ವ್ಯವಸ್ಥೆ ಜಾಗೃತಿ ಕರಪತ್ರವನ್ನು ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಲೋಕಾರ್ಪಣೆಗೊಳಿಸಿದರು. ಭೊರಸೆ ಭೂಸನ್, ಮೊಹಮ್ಮದ ರೋಷನ್, ರಾಹುಲ ಶಿಂಧೆ ಇತರರಿದ್ದರು.
ಬೆಳಗಾವಿ ನಗರದಲ್ಲಿ ‘ಬೀಗ ಹಾಕಿದ ಮನೆ ಗಸ್ತು ವ್ಯವಸ್ಥೆ ಜಾಗೃತಿ ಕರಪತ್ರವನ್ನು ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಲೋಕಾರ್ಪಣೆಗೊಳಿಸಿದರು. ಭೊರಸೆ ಭೂಸನ್, ಮೊಹಮ್ಮದ ರೋಷನ್, ರಾಹುಲ ಶಿಂಧೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • -ನಗರ ಪೊಲೀಸ್ ಆಯುಕ್ತರ ಕ್ರಮಕ್ಕೆ ಪ್ರಶಂಸೆ
ಬೆಳಗಾವಿ:ಮಹಾನಗರದಲ್ಲಿ ಬೀಗ ಹಾಕಿರುವ ಮನೆ, ಒಂಟಿ ಮಹಿಳೆಯರು ಮನೆ ಗುರಿಯಾಗಿಸಿಕೊಂಡು ನಡೆಯುತ್ತಿರುವ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಲು, ನಾಗರಿಕರ ಜೀವಆಸ್ತಿ ರಕ್ಷಣೆಗೆ ಬದ್ಧವಾಗಿರುವ ನಗರ ಪೊಲೀಸರು ‘ಬೀಗ ಹಾಕಿದ ಮನೆ ಗಸ್ತು ವ್ಯವಸ್ಥೆ’ (ಎಲ್‌ಎಚ್‌ಬಿಎಸ್) ನೂತನ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಬೆಳಗಾವಿ ಮಹಾನಗರದಲ್ಲಿ ಮನೆಗಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ರಜೆ ದಿನ, ಸಭೆ ಸಮಾರಂಭಗಳಿಗೆ ಮನೆ ಬೀಗ ಹಾಕಿಕೊಂಡು ಹೋಗದಂತಹ ಭಯದ ವಾತಾವರಣ ಜನಸಾಮಾನ್ಯರಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕವುದರ ಜತೆಗೆ ಕಳ್ಳರನ್ನು ಹೆಡೆಮುರಿ ಕಟ್ಟಲು ಪೊಲೀಸರು ಕಾರ್ಯತಂತ್ರ ರೂಪಿಸಿದ್ದಾರೆ. ಜನರಕ್ಷಣೆಗಾಗಿಯೇ ಬೀಗ ಹಾಕಿದ ಮನೆ ಗಸ್ತು ಎಂಬ ಸುರಕ್ಷತಾ ವ್ಯವಸ್ಥೆ ಪರಿಚೆಯಿಸಿದ್ದಾರೆ.
ಇನ್ನುಮುಂದೆ ನಗರದ ನಿವಾಸಿಗಳು ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ಪ್ರಯಾಣಿಸುವ ನಾಗರಿಕರು ತಮ್ಮ ಮನೆಯ ವಿವರ ಮುಂಚಿತವಾಗಿ ಸಲ್ಲಿಸಿದರೆ ಅಂತಹ ಮನೆಗಳಿಗೆ ದಿನದ 24 ಗಂಟೆ ಬೀಟ್ ಪೊಲೀಸರು ಆ ಮನೆಗಳ ಮೇಲೆ ನಿಗಾ ವಹಿಸಲಿದ್ದಾರೆ. ಈ ಸುರಕ್ಷತಾ ವ್ಯವಸ್ಥೆಯಡಿ ನಾಗರಿಕರು ತಮ್ಮ ಪ್ರಯಾಣದ ದಿನಾಂಕ, ಮನೆಯ ವಿಳಾಸ, ಸ್ಥಳ ಮಾಹಿತಿ ಹಾಗೂ ಗುರುತಿನ ದೃಢೀಕರಣಕ್ಕಾಗಿ ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ. ನಾಗರಿಕರು ತಮ್ಮ ಅಮೂಲ್ಯ ವಸ್ತುಗಳನ್ನು ಬ್ಯಾಂಕ್‌ನ ಸುರಕ್ಷಿತ ಲಾಕರ್‌ಗಳಲ್ಲಿ ಠೇವಣಿ ಇಡುವಂತೆ ಹಾಗೂ ವಸತಿ ಪ್ರದೇಶಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್‌ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈಗಾಗಲೇ ಈ ಕುರಿತು ನಗರ ಪೊಲೀಸರು ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು, ಮಾಹಿತಿ ನೀಡುವ ವಿಧಾನ ಹಾಗೂ ಕಳ್ಳತನ ತಪ್ಪಿಸಲು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ವಿವರ ಹೊಂದಿರುವ ಮಾಹಿತಿಯನ್ನು ಸಾಮಾಜಿ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ವಿವರಿಸಲಾಗುತ್ತಿದೆ.ಪ್ರಾಥಮಿಕ ಹಂತದಲ್ಲಿ ನಗರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ.ಈ ವಿನೂತನ ಪ್ರಯೋಗವು ಕಳ್ಳತನ ಪ್ರಕರಣಗಳಿಗೆ ತಡೆಗೋಡೆ ನಿರ್ಮಿಸಿ, ನಾಗರಿಕರಲ್ಲಿ ಭದ್ರತೆಯ ಭರವಸೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
..................
ಕೋಟ್ಸ್
ನಗರದ ನಾಗರಿಕರ ಸುರಕ್ಷತೆ ಹಿತದೃಷ್ಟಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಂ (ಎಲ್‌ಎಚ್‌ಬಿಎಸ್) ಎಂಬ ನೂತನ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸದ್ದೇವೆ. ಸಾರ್ವಜನಿಕರು ಮನೆಗೆ ಬೀಗ ಹಾಕಿ ಪರ ಊರುಗಳಿಗೆ ಹೋಗುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಗಳ್ಳತನ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ನಾಗರಿಕರು ಕೈ ಜೋಡಿಸಬೇಕು.
-ಭೊರಸೆ ಭೂಸನ್, ನಗರ ಪೊಲೀಸ್ ಆಯುಕ್ತ
.............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net