ಬೆಳಗಾವಿ ನಗರದ ಸರ್ಕಾರಿ ಸರ್ದಾರ್ಸ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ನವೀನ ವಿನ್ಯಾಸದ ಚೆಸ್ ಪಾರ್ಕ್‌ನ್ನು ಶನಿವಾ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಆಸೀಫ್ ಸೇಠ್, ರಾಹುಲ ಶಿಂಧೆ, ಮೊಹಮ್ಮದ ರೋಷನ್ ಇತರರಿದ್ದರು.
ನಗರದ ಸರ್ಕಾರಿ ಸರ್ದಾರ್ಸ ಪ್ರೌಢಶಾಲಾ ಆವರಣದಲ್ಲಿ ಪಾಳುಬಿದ್ದ ಹಳೆಯ ಕಟ್ಟಡ ನವೀಕರಣಗೊಳಿಸಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ನವೀನ ವಿನ್ಯಾಸದ ಚೆಸ್ ಪಾರ್ಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಬೆಳಗಾವಿಯ ಹೃದಯಭಾಗದಲ್ಲಿರುವ ಹಳೆಯ ಕಟ್ಟಡಗಳು ನಗರದ ಶಿಕ್ಷಣ ಹಾಗೂ ಸಾಮಾಜಿಕ ಪರಂಪರೆಯ ಪ್ರತೀಕಗಳಾಗಿವೆ. ಆದರೆ ಕಾಲದ ಹೊಡೆತಕ್ಕೆ ಶಿಥಿಲಗೊಂಡು ಬಳಕೆಗೆ ಯೋಗ್ಯವಾಗಿರದ ಕಟ್ಟಡಗಳನ್ನು ತೆರವುಗೊಳಿಸಿ, ಅದೇ ಸ್ಥಳವನ್ನು ಮಕ್ಕಳ ಕಲಿಕೆ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಬಳಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಡಿಜಿಟಲ್ ಸಾಧನಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ, ಚೆಸ್ ಪಾರ್ಕ್ ಅವರಿಗೆ ನೇರವಾಗಿ ಆಟವಾಡಲು, ಯೋಚಿಸಲು ಮತ್ತು ಸಹಪಾಠಿಗಳೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ. ಚೆಸ್‌ನಂತಹ ಬೌದ್ಧಿಕ ಕ್ರೀಡೆ ಮಕ್ಕಳಲ್ಲಿ ಏಕಾಗ್ರತೆ, ತಾಳ್ಮೆ, ತಾರ್ಕಿಕ ಚಿಂತನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಶಾಲಾ ಆವರಣದಲ್ಲಿ ಪಾಳುಬಿದ್ದಿದ್ದ ಕಟ್ಟಡದ ಬದಲಿಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಚಟುವಟಿಕೆ ಕೇಂದ್ರ ನಿರ್ಮಿಸುವ ಪರಿಕಲ್ಪನೆಗೆ ಶಾಸಕ ಆಸೀಫ ಸೇಠ ತಕ್ಷಣ ಸ್ಪಂದಿಸಿ ಅನುದಾನ ಒದಗಿಸಿ, ಯೋಜನೆಯ ರೂಪುರೇಷೆಗೆ ಮಾರ್ಗದರ್ಶನ ನೀಡಿದರು. ಪರಿಣಾಮವಾಗಿ ವಿಶಿಷ್ಟ ವಿನ್ಯಾಸದ ಚೆಸ್ ಪಾರ್ಕ್ ನಿರ್ಮಾಣಗೊಂಡಿದೆ ಎಂದರು.
ಸ್ವಚ್ಛ ಹಾಗೂ ಹಸಿರು ಪರಿಸರ, ಮರಗಳ ನೆರಳು, ಕುಳಿತುಕೊಳ್ಳಲು ಬೆಂಚುಗಳು ಮತ್ತು ಮಕ್ಕಳನ್ನು ಸೆಳೆಯುವ ವಿನ್ಯಾಸದೊಂದಿಗೆ ಪಾರ್ಕ್ ರೂಪುಗೊಂಡಿದೆ. ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಸ್ಥಳವೊಂದು ಇದೀಗ ವಿದ್ಯಾರ್ಥಿಗಳಲ್ಲಿ ಚೆಸ್ ಆಟದ ಆಸಕ್ತಿ ಬೆಳೆಸುವ ಬೌದ್ಧಿಕ ಕ್ರೀಡಾಂಗಣವಾಗಿ ಬದಲಾಗಿದೆ ಎಂದರು.
ಶಾಸಕ ಆಸೀಪ್ ಸೇಠ್,ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಸುನೀಲ ಹನಮನ್ನವರ,ಡಿಸಿ ಮೊಹಮ್ಮದ ರೋಷನ್, ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಎಸ್‌ಪಿ ಕೆ.ರಾಮರಾಜನ್ ಇತರರಿದ್ದರು.